ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ವಾಡಿಕೆ ಮಳೆ ಆಗದಿದ್ದರೂ ಕಳೆದೊಂದು ವಾರದಿಂದ ಎಡೆಬಿಡದೇ ಸುರಿಯುತ್ತಿರುವ ಮಳೆ ಜಿಲ್ಲೆಯಲ್ಲಿ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಕಳೆದ ಬಾರಿ ಕುಸಿದಿದ್ದ ಕೆಲ ಗುಡ್ಡಗಳ ಬಳಿ ಸಡಿಲಗೊಂಡಿದ್ದ ಮಣ್ಣು ಕುಸಿದಿರೋದು ಜಿಲ್ಲೆಯ ಜನರ ಆತಂಕಕ್ಕೆ ಕಾರಣವಾಗಿದೆ. ಮತ್ತೊಂದೆಡೆ ಜಿಲ್ಲೆಯ ನದಿ ತೊರೆ, ಹಳ್ಳ ಕೊಳ್ಳ, ಜಲಪಾತಗಳು ಉಕ್ಕಿ ಹರಿಯುತ್ತಿವೆ. ಮಳೆ ಹೀಗೆ ಮುಂದುವರಿದಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಸಾಧ್ಯತೆಯಿದೆ.
ರೆಡ್ ಅಲರ್ಟ್ ಘೋಷಣೆಯಾಗಿ ಬಳಿಕ ಆರೆಂಜ್ ಅಲರ್ಟ್‌ನಲ್ಲಿದ್ದ ಜಿಲ್ಲೆಗೆ ಮತ್ತೆ ಜಿಲ್ಲಾಡಳಿತ ಜುಲೈ 22 ರಿಂದ 24 ರವರೆಗೆ ರೆಡ್ ಅಲರ್ಟ್ ಘೋಷಿಸಿದೆ. ವಿರಾಜಪೇಟೆ ತಾಲೂಕಿನಲ್ಲಿ ವರುಣನ ಅಬ್ಬರಕ್ಕೆ ಮರ ಉರುಳಿ ವಾಹನಗಳು ಜಖಂಗೊಂಡಿವೆ. ಅಷ್ಟೇ ಅಲ್ಲದೇ ನಾಪೋಕ್ಲು ಬಳಿ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ಮಳೆ ಮುಂದುವರಿದಲ್ಲಿ ರಸ್ತೆ ಮುಳುಗಡೆಯಾಗುವ ಭೀತಿ ಎದುರಾಗಿದೆ.