ಕೊಡಗು: ಶಾರ್ಟ್ ಸರ್ಕ್ಯೂಟ್ನಿಂದ ಫರ್ನೀಚರ್ ಗೋದಾಮಿಗೆ ಒಂದಕ್ಕೆ ಬೆಂಕಿ ಬಿದ್ದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಫರ್ನೀಚರ್ಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಮಡಿಕೇರಿಯಲ್ಲಿನ ಪ್ರಶಾಂತ್ ಫರ್ನೀಚರ್ ಗೋಡೌನ್ಗೆ ರಾತ್ರಿ ಬೆಂಕಿ ಬಿದ್ದಿದ್ದು, ಯಾರೂ ಇಲ್ಲದ ಕಾರಣ ಗೋಡೌನ್ ಒಳಗಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ.
ಎಂದಿನಂತೆ ಸಂಜೆ ಮಾಲೀಕರು ಗೋದಾಮಿನ ಬಾಗಿಲು ಮುಚ್ಚಿ ಮನೆಗೆ ಹೋಗಿದ್ದು, ರಾತ್ರಿ ವೇಳೆ ಶಾರ್ಟ್ ಸರ್ಕ್ಯೂಟ್ ಆಗಿದೆ. ಅದರಿಂದಾಗಿ ಬೆಂಕಿ ಹೊತ್ತಿಕೊಂಡಿದೆ. ಗೋದಾಮಿನಲ್ಲಿ ಪರ್ನೀಚರ್ ವಸ್ತುಗಳು ಇದ್ದ ಕಾರಣ ಬೆಂಕಿ ಎಲ್ಲ ಕಡೆಯಲ್ಲೂ ಆವರಿಸಿಕೊಂಡಿದೆ. ಮರದ ವಸ್ತುಗಳಾದ ಕಾರಣ ಬೆಂಕಿ ಬಹುಬೇಗನೆ ಹತ್ತಿಕೊಂಡು ಧಗಧಗನೆ ಉರಿದಿದೆ. ಗೋದಾಮಿನಲ್ಲಿದ್ದ ಬೆಲೆ ಬಾಳುವ ವಸ್ತುಗಳು ನಾಶವಾಗಿವೆ. ಮುಂಜಾನೆ ಹೊತ್ತಿಗೆ ಪಕ್ಕದಲ್ಲಿದ್ದ ಜನರು ಬೆಂಕಿ ನೋಡಿ ಅಗ್ನಿಶಾಮಕ ಸಿಬ್ಬಂದಿಗೆ ತಿಳಿಸಿದ್ದಾರೆ. ಈ ಕಾರಣದಿಂದ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕದಳದ ಸಿಬ್ಬಂದಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನಿಸಿದ್ದಾರೆ. ಕೆಲವು ಗಂಟೆಗಳ ಕಾಲ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಪ್ರಯತ್ನ ಪಟ್ಟಿದ್ದು, ಅಷ್ಟು ಹೊತ್ತಿಗಾಗಲೇ ಬೆಂಕಿ ಧಗಧಗನೇ ಉರಿದು ಎಲ್ಲ ವಸ್ತುಗಳು ನಾಶವಾಗಿವೆ.
ವಿಜಯಪುರ- ಆಟೋ, ಬೈಕ್‌ಗೆ ಬೆಂಕಿ ಹಚ್ಚಿ ಪರಾರಿಯಾದ ಕಿಡಿಗೇಡಿಗಳು: ಮನೆ ಮುಂದೆ ನಿಲ್ಲಿಸಿದ್ದ ಆಟೋ ಹಾಗೂ ಬೈಕ್‌ಗೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ವಿಜಯಪುರದ ಕಾಳಿಕಾ ನಗರದಲ್ಲಿ ಕಳೆದ ರಾತ್ರಿ ನಡೆದಿದೆ. ರೇಣುಕಾ ಮೆಂಡೇಗಾರ ಎಂಬುವರಿಗೆ ಸೇರಿದ ಒಂದು ಆಟೋ ಹಾಗೂ ಒಂದು ಬೈಕ್ ಸಂಪೂರ್ಣವಾಗಿ ಭಸ್ಮವಾಗಿದೆ. ಮನೆಯ ಎದುರೇ ನಿಲ್ಲಿಸಿದ್ದ ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ವಾಹನಗಳೆರಡು ಸುಟ್ಟು ಕರಗಲಾಗಿವೆ. ಕಿಡಿಗೇಡಿಗಳು ಆಟೋ ಹಾಗೂ ಬೈಕ್‌ಗೆ ಏಕಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎನ್ನುವ ಕುರಿತು ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರ್ಶ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಸಾಲಬಾಧೆಗೆ ಛಾಯಾಗ್ರಾಹಕ ಸಾವು: ಸಾಲಬಾಧೆ ತಾಳಲಾರದೇ ಛಾಯಾಗ್ರಾಹಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ನಾದ ಕೆ ಡಿ ಗ್ರಾಮದಲ್ಲಿ ನಡೆದಿದೆ. ಶಿವು ದ್ಯಾವಪ್ಪ ತಳಕೇರಿ (30) ಆತ್ಮಹತ್ಯೆಗೆ ಶರಣಾದ ಯುವಕನಾಗಿದ್ದಾನೆ. ಈತ ಬ್ಯಾಂಕ್‌ನಲ್ಲಿ 15 ಲಕ್ಷ ಸಾಲ ಮಾಡಿಕೊಂಡಿದ್ದನು. ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ, ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಬೆಂಕಿ ಅವಘಡ: ಅಪಾರ ಪ್ರಮಾಣದ ಆಸ್ತಿ ಹಾನಿ, ನಾಲ್ಕು ಎಮ್ಮೆಗಳ ಸ್ಥಿತಿ ಗಂಭೀರ