ಕೊಡಗು: ಜಿಲ್ಲೆಯಲ್ಲಿ ಮುಂಗಾರು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ದೇವಾಲಯದಲ್ಲಿ ಮಾಡಿದ ಪೂಜೆಗಳ ನಂತರವೂ ವರುಣ ರಾಯ ಕೃಪೆ ತೋರಿಲ್ಲ. ಈಗ ಕೂಡಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮಸ್ಥರು ಕಪ್ಪೆಗಳಿಗೆ ಮದುವೆ ಮಾಡಿದ್ರೇ ಉತ್ತಮ ಮಳೆಯಾಗುತ್ತೆ ಎಂಬ ನಂಬಿಕೆಯಿಂದ ಆ ಸಂಪ್ರದಾಯವನ್ನೂ ಮಾಡಿದ್ದಾರೆ. ಹೀಗಾದರೂ ವರುಣ ದೇವ ಕೃಪೆ ತೋರುತ್ತಾನೆ ಎಂಬ ಆಶಾವಾದ ಜನರದ್ದಾಗಿದೆ.
ಸಮೀಪದ ಹಳ್ಳದಲ್ಲಿ ಗಂಡು-ಹೆಣ್ಣು ಎಂಬ ಎರಡು ಕಪ್ಪೆಗಳನ್ನು ಹಿಡಿದು ರೈತರೊಬ್ಬರ ಜಮೀನಿನಲ್ಲಿ ತೆಂಗಿನ ಗರಿಗಳಿಂದ ಚಪ್ಪರ ಹಾಕಿದ್ದರು. ಕಪ್ಪೆಗಳಿಗೆ ಹರಿಶಿಣ-ಕುಂಕುಮ ಬಳಿದು ಹೂಗಳಿಂದ ಅಲಂಕರಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿ ಬರಡಾಗಿರುವ ಭೂಮಿಗೆ ಮಳೆ ಬೀಳಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ನಂತರ ಪೂಜೆಗೆ ಆಗಮಿಸಿದ್ದವರಿಗೆ ಊಟದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಜಿಲ್ಲೆಯಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಮಳೆ ನಂಬಿ ಬಿತ್ತನೆ ಮಾಡಿದ್ದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ. ಕಳೆದ ವರ್ಷ ಈ ವೇಳೆಗಾಗಲೇ ವಿಪರೀತ ಮಳೆಯಾಗಿ ಜಿಲ್ಲೆಯ ಜನ ಜೀವನವನ್ನೇ ಅಸ್ತವ್ಯಸ್ತ ಮಾಡಿತ್ತು. ಈ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ರೈತರು ಧಾರ್ಮಿಕ ನಂಬಿಕೆಯ ಮೊರೆ ಹೋಗ್ತಿದ್ದಾರೆ.