ಕೊಡಗು: ಮಧ್ಯಂತರ ನೆರೆ ಪರಿಹಾರವಾಗಿ ಕೇಂದ್ರ ಸರ್ಕಾರ ₹1,200 ಕೋಟಿ ಬಿಡುಗಡೆ ಮಾಡಿದ್ದು, ಮುಂದೆ ಇನ್ನೂ ಹೆಚ್ಚಿನ ನೆರವು ನೀಡುವ ಭರವಸೆ ಇದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೂ ಹಿಂದೆಯೇ ₹1,500 ಕೋಟಿ ಬಿಡುಗಡೆಗೊಳಿಸಿದ್ದು, ಇನ್ನೂ ಹೆಚ್ಚಿನ ನೆರವು ನೀಡಲಿದೆ. ಪ್ರಕೃತಿ ವಿಕೋಪದಿಂದ ಹಾಳಾದ ಕೊಡಗಿನ ರಸ್ತೆಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರ ವಹಿಸಿಕೊಂಡ ಮೂರೇ ದಿನದಲ್ಲಿ ₹ 100 ಕೋಟಿ ನೀಡಿದ್ದರು ಎಂದು ಹೇಳಿದರು.
ಈಗಾಗಲೇ ಜಿಲ್ಲಾ ಪಂಚಾಯಿತಿಗೆ ₹ 60 ಕೋಟಿ, ಲೋಕೋಪಯೋಗಿ ಇಲಾಖೆಗೆ ₹ 30 ಕೋಟಿ, ಮಡಿಕೇರಿಗೆ ₹ 6 ಕೋಟಿ, ವಿರಾಜಪೇಟೆಗೆ ₹ 3 ಕೋಟಿ, ಕುಶಾಲನಗರ ಮತ್ತು ಸೋಮವಾರಪೇಟೆಗೆ ತಲಾ ₹2 ಕೋಟಿ ನೀಡಲು ನಿರ್ಧರಿಸಲಾಗಿದೆ. ಹಾಳಾಗಿರುವ ರಸ್ತೆಗಳ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಪ್ರವಾಹದ ಸಂಕಷ್ಟದಲ್ಲಿದ್ದವರಿಗೆ ಸ್ಥಳೀಯ ಶಾಸಕರು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ. ಸಂತ್ರಸ್ತರ ಸಂಕಷ್ಟಗಳಿಗೆ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ದೂಷಿಸುವ ಬದಲು ಪಕ್ಷಾತೀತವಾಗಿ ಎಲ್ಲರೂ ಕೆಲಸ ಮಾಡಬೇಕಿದೆ. ಜಿಲ್ಲಾಡಳಿತದಲ್ಲೇ ಇರುವ ಅನುದಾನವನ್ನೇ ಬಳಸಿಕೊಳ್ಳಲು ಕೆಲವರು ಮುಂದಾಗಿಲ್ಲ ಎಂದು ಆರೋಪಿಸಿದರು.