ಕೊಡಗು: ಇಲ್ಲಿಯ ದುಬಾರೆ ಶಿಬಿರದ 5 ಸಾಕಾನೆಗಳನ್ನು ಶನಿವಾರ ಮಧ್ಯಪ್ರದೇಶ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಶಿಬಿರದಲ್ಲಿ ಒಟ್ಟು 32 ಆನೆಗಳಿವೆ. ನಿರ್ವಹಣೆ ಹಾಗೂ ಒತ್ತಡ ಕಡಿಮೆ ಮಾಡುವ ಉದ್ದೇಶದಿಂದ ಜನರಲ್ ತಿಮ್ಮಯ್ಯ, ಜನರಲ್ ಕಾರ್ಯಪ್ಪ, ವಲ್ಲಿ, ಲವ, ಮಾರುತಿ ಎಂಬ ಹೆಸರಿನ ಸಾಕಾನೆಗಳನ್ನು ಮಧ್ಯಪ್ರದೇಶದ ಭೋಪಾಲ್‌ನಲ್ಲಿರುವ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಶಿಬಿರದ ಮಾವುತರೊಂದಿಗೆ ಆನೆಗಳು ಲಾರಿಯ ಮೂಲಕ ಭೋಪಾಲ್‌ಗೆ ತೆರಳಿವೆ.
ದುಬಾರೆ ಶಿಬಿರದಿಂದ ಎಂಟು ಮಾವುತರು ಮತ್ತು ಉಸ್ತುವಾರಿಗಳು ಆನೆಗಳೊಂದಿಗೆ ಮಧ್ಯಪ್ರದೇಶಕ್ಕೆ ತೆರಳಿದ್ದಾರೆ. ಕೊಡಗು ವಿಭಾಗದ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಭೋಪಾಲ್, ಮಧ್ಯಪ್ರದೇಶ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿಯ ಸಮ್ಮುಖದಲ್ಲಿ ಆನೆಗಳನ್ನು ವರ್ಗಾವಣೆ ಮಾಡಲಾಗಿದೆ. ಈ ಹಿಂದೆ ಈ ಐದು ಆನೆಗಳು ಕಾಡಿನಿಂದ ನಾಡಿಗೆ ಬಂದು ಪುಂಡಾಟ ಮೆರೆಯುತ್ತಿದ್ದವು. ಇವುಗಳನ್ನು ಸೆರೆಹಿಡಿದು ದುಬಾರೆ ಶಿಬಿರದಲ್ಲಿ ಪಳಗಿಸಲಾಗಿತ್ತು.
ಇದನ್ನೂ ಓದಿ: ಅರಿವಳಿಕೆ ಚುಚ್ಚು ಮದ್ದು ಪಡೆದು ಅರೆ ಮಂಪರಿನಲ್ಲಿದ್ದ ಕಾಡಿನತ್ತ ಓಡಿಹೋದ ಆನೆ