ವಿರಾಜಪೇಟೆ (ಕೊಡಗು): ಕ್ಷುಲ್ಲಕ ಕಾರಣಕ್ಕೆ ಸಂಬಂಧಿಕರನ್ನೇ ಚಾಕುವಿನಿಂದ ಇರಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ರಾಮ್ದಾಸ್ ಎಂಬಾತ ತನ್ನ ಸಂಬಂಧಿಗಳಾದ ವಿಲ್ಸನ್, ಆತನ ಅತ್ತಿಗೆ ಮಗ ಸ್ಟೀಫನ್, ಅತ್ತಿಗೆ ಮಗಳು ತೀರ್ಥಳಿಗೆ ಚಾಕು ಇರಿದಿದ್ದು, ಅವರೀಗ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ನರಳಾಡುತ್ತಿದ್ದಾರೆ. ಕ್ರಿಸ್ಮಸ್ ಆಚರಿಸಿ ಸಂತಸದಲ್ಲಿದ್ದ ಕುಟುಂಬದಲ್ಲೀಗ ಕಣ್ಣೀರು ತುಂಬಿದ್ದು, ಗ್ರಾಮಸ್ಥರು ಸಹ ಭೀಕರತೆಗೆ ಬೆಚ್ಚಿಬಿದ್ದಿದ್ದಾರೆ.
ಘಟನೆ ಹಿನ್ನೆಲೆ: ಕ್ರಿಸ್ಮಸ್ ಬಳಿಕ ವಿಲ್ಸನ್ ಮನೆಗೆ ಆಗಮಿಸಿದ್ದ ಆರೋಪಿ ರಾಮ್ದಾಸ್, ಎಲ್ಲರ ಜೊತೆ ಚೆನ್ನಾಗಿಯೇ ಮಾತನಾಡಿದ್ದ, ಬಳಿಕ ವಿಲ್ಸನ್ ಪತ್ನಿ ಸ್ನಾನಕ್ಕೆ ಹೋದಾಗ ಕದ್ದು ನೋಡಲು ಹೋಗಿ ಸಿಕ್ಕಿಬಿದ್ದು ಧರ್ಮದೇಟು ತಿಂದಿದ್ದ, ಅಕ್ಕಪಕ್ಕದ ಮನೆಯವರು ಸಹ ಬೈದು ಬುದ್ದಿ ಹೇಳಿದ್ದರು.
ಬಳಿಕ ರಾತ್ರಿ ಮನೆಗೆ ವಾಪಸಾಗಿದ್ದ ರಾಮ್ದಾಸ್ ಸಂಬಂಧಿಕರ ಮುಗಿಸುವ ಹುನ್ನಾರ ಮಾಡಿದ್ದ, ಈ ಹಿನ್ನೆಲೆ ಒಂದಿಬ್ಬರು ಹುಡುಗರ ಕಟ್ಟಿಕೊಂಡು ವಿಲ್ಸನ್ ಮನೆಗೆ ಬಂದಿದ್ದಾತ ಮತ್ತೆ ಗಲಾಟೆ ತೆಗೆದಿದ್ದ. ಈ ವೇಳೆ, ವಿಲ್ಸನ್ ಹೊಟ್ಟೆಯ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾನೆ. ಬಳಿಕ ಅಲ್ಲಿಯೇ ಇದ್ದ ಅತ್ತಿಗೆ ಮಗ ಸ್ಟೀಫನ್ ಹಾಗೂ ಅತ್ತಿಗೆ ಮಗಳು ತೀರ್ಥಳಿಗೂ ಇರಿದಿದ್ದಾನೆ.
ಈ ಗಲಾಟೆ ಕೇಳಿ ಓಡಿಬಂದ ಅಕ್ಕಪಕ್ಕದ ಮನೆಯವರು ರಕ್ತದ ನಡುವೆ ಬಿದ್ದಿದ್ದ ಮೂವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಮೂವರನ್ನು ಸದ್ಯ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇಷ್ಟೆಲ್ಲ ಆಗುವಷ್ಟರಲ್ಲೇ ರಾಮದಾಸ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಸಿದ್ಧಾಪುರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಮೋಹನ್ ರಾಜ್ ಪ್ರಕರಣ ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿ ರಾಮ್ದಾಸ್ ಹಡೆಮುರಿ ಕಟ್ಟಲು ವಿಶೇಷ ತಂಡ ರಚಿಸಿದ್ದಾರೆ.
ಇದನ್ನೂ ಓದಿ: ‘ಕೋಳಿ ಸಾಂಬಾರ್ ಕಡಿಮೆ ಬಡಿಸಿದ್ದೀಯಾ’.. ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ