ಕೊಡಗು: ಕಾಡಿನಿಂದ ನಾಡಿಗೆ ಲಗ್ಗೆ ಇಟ್ಟು ಜನರಲ್ಲಿ ಆತಂಕ ಸೃಷ್ಟಿಸಿರುವ ಕಾಡಾನೆಗಳನ್ನು ಮರಳಿ ಕಾಡಿಗೆ ಕಳುಹಿಸಲು ಮಡಿಕೇರಿ ತಾಲೂಕಿನ ಚೆಟ್ಟಳ್ಳಿ ಕಾಫಿ ತೋಟದಲ್ಲಿ ಅರಣ್ಯ ಇಖಾಖೆ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.
ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಅವರ ನೇತೃತ್ವದಲ್ಲಿ ಮೀನುಕೊಲ್ಲಿ ಹಾಗೂ ಆನೆಕಾಡು ಸಿಬ್ಬಂದಿ ತಂಡ ಚೆಟ್ಟಳ್ಳಿ ವ್ಯಾಪ್ತಿಯ ಮೋದೂರು, ಹೊರೂರು ಹಾಗೂ ಈರಳೆವಳಮುಡಿ ಗ್ರಾಮಗಳ ಕಾಫಿ ತೋಟದೊಳಗೆ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಮರಳಿ ಕಾಡಿಗೆ ಹಿಮ್ಮೆಟ್ಟಿಸುವ ಕಾರ್ಯಚರಣೆಗೆ ಇಳಿದಿತ್ತು. ಪಟಾಕಿ ಸಿಡಿಸಿ ಪೊದೆಯೊಳಗೆ ಅಡಗಿದ್ದ ಕಾಡಾನೆಗಳನ್ನು ಓಡಿಸಲು ಸಿಬ್ಬಂದಿ ಯತ್ನಿಸಿದ್ದರೂ ಆನೆಗಳು ಸಿಬ್ಬಂದಿಯನ್ನೇ ದಾರಿ ತಪ್ಪಿಸಿದ್ದವು. ಎರಡು ಕಾಡಾನೆಗಳ ಜೊತೆಗೆ ಮರಿ ಆನೆಯೊಂದು ಇದ್ದಿದ್ದರಿಂದ ಉದ್ರಿಕ್ತಗೊಂಡು ಸಿಬ್ಬಂದಿಯನ್ನೇ ಹಿಮ್ಮೆಟ್ಟಿಸಿದ್ದವು.
ಅರಣ್ಯ ಇಲಾಖೆಯ ಸಿಬ್ಬಂದಿಯನ್ನೇ ಆನೆಗಳು ಬೆದರಿಸುತ್ತಿವೆ. ಬೆಳಗ್ಗೆ ಮನೆ ಮತ್ತು ತೋಟದ ಸಮೀಪದಲ್ಲಿ ಕಾಡಾನೆಗಳು ಓಡಾಡುತ್ತಿದ್ದು, ಆತಂಕದಲ್ಲಿ ಬದುಕುತ್ತಿದ್ದೇವೆ. ಒಂದು ವೇಳೆ ಪ್ರಾಣಹಾನಿ ಸಂಭವಿಸಿದರೆ ಸರ್ಕಾರ ಚಿಲ್ಲರೆ ಹಣ ಕೊಟ್ಟು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತದೆ. ನಮಗೆ ಸರ್ಕಾರದಿಂದ ಶಾಶ್ವತ ಪರಿಹಾರ ಬೇಕಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.