ಕೊಡಗು: ಜಿಲ್ಲೆಯ ಸಿದ್ದಾಪುರ ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದ್ದು, ಕಾಡಾನೆಗಳ ಹಿಂಡು ಕದಲದೆ ಕಾಫಿ ತೋಟಗಳಲ್ಲೇ ಬೀಡು ಬಿಟ್ಟಿದೆ.
ಬೆಳಗ್ಗೆ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ಹಾಗೂ ಆರ್.ಆರ್.ಟಿ ತಂಡ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ಆರಂಭಿಸಿದ್ದು, ತುಂತುರು ಮಳೆಯಲ್ಲಿ ಕಾರ್ಯಾಚರಣೆ ಮುಂದುವರೆಸಿದ್ದರು. ಅಭ್ಯತ್ ಮಂಗಲ ಗ್ರಾಮದ ಕಾಟಿಬಾಣೆ ಎಸ್ಟೇಟ್ನಲ್ಲಿ ಸುಮಾರು 7 ಕಾಡಾನೆಗಳ ಹಿಂಡು ಇದ್ದು, ಪಟಾಕಿ ಸಿಡಿಸಿದರೂ ಕಾಡಾನೆಗಳು ಕದಲದೇ ತೋಟದಲ್ಲೇ ಬೀಡುಬಿಟ್ಟಿದೆ. ಅರಣ್ಯಕ್ಕೆ ಕಾಡಾನೆಗಳನ್ನು ಓಡಿಸಲು ಮುಖ್ಯ ರಸ್ತೆಯ ಮೂಲಕ ಕಾಡಾನೆಗಳು ಹೋಗಬೇಕಾಗಿದ್ದು, ರಸ್ತೆಯ ಬಳಿಯವರೆಗೂ ಬರುವ ಕಾಡಾನೆಗಳು ಪುನಃ ತೋಟಕ್ಕೆ ತೆರಳುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕುಶಾಲನಗರ ವಲಯ ಅರಣ್ಯ ವ್ಯಾಪ್ತಿಯ ನೆಲ್ಯಹುದಿಕೇರಿ, ಅಭ್ಯತ್‍ಮಂಗಲ, ವಾಲ್ನೂರು-ತ್ಯಾಗತ್ತೂರು ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಸುಮಾರು 20 ಕ್ಕೂ ಅಧಿಕ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟಿವೆ. ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಮಿತಿಮೀರಿದ್ದು, ಕಾಫಿ ಸೇರಿದಂತೆ ಕೃಷಿ ಫಸಲನ್ನು ನಾಶ ಮಾಡುತ್ತಿವೆ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರು.
ಮತ್ತೊಂದೆಡೆ ಮೇರಿಲ್ಯಾಂಡ್ ಕಾಫಿ ತೋಟ ಹಾಗೂ ಸುತ್ತಮುತ್ತಲ ತೋಟದಲ್ಲಿಯೂ ಸುಮಾರು 13 ಕಾಡಾನೆಗಳ ಹಿಂಡು ಇದ್ದು, ಕಾಡಾನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಹರಸಾಹಸ ಪಡುವಂತಾಗಿದೆ. ಇತ್ತೀಚೆಗೆ ಇದೇ ಗ್ರಾಮದಲ್ಲಿ ಕಾಡಾನೆಗಳನ್ನು ಕಾರ್ಯಾಚರಣೆ ನಡೆಸಿ ಸಮೀಪದ ದುಬಾರೆ ಅರಣ್ಯಕ್ಕೆ ಅಟ್ಟಿಸಲಾಗಿತ್ತು. ಬಳಿಕ ಕಾಡಾನೆಗಳ ಹಿಂಡು ಮತ್ತೆ ಕಾಫಿ ತೋಟಗಳಿಗೆ ಲಗ್ಗೆ ಇಟ್ಟು ಕೃಷಿ ಫಸಲನ್ನು ನಾಶ ಮಾಡುತ್ತಿದೆ. ಕಾಡಾನೆಗಳ ಹಾವಳಿಯನ್ನು ತಡೆಯಲು ಸರಕಾರ ಶಾಶ್ವತ ಯೋಜನೆಯನ್ನು ರೂಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.