ಕೊಡಗು: ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ಗೆ ನೋಟಿಸ್ ನೀಡಿದ್ದಾರೆ ಅನ್ನುವುದು ಸರಿಯಲ್ಲ. ಯಾವ ಉದ್ದೇಶಕ್ಕೆ ಅವರಿಗೆ ನೋಟಿಸ್ ಕೊಟ್ಟಿದ್ದಾರೆ ಎಂಬುದನ್ನು ವಿಚಾರಿಸುವೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.
ನಗರದ ಖಾಸಗಿ ಶಾಲೆಯೊಂದರ ಕಾರ್ಯಕ್ರಮಕ್ಕೆ ಆಗಮಿಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಅವರಿಗೆ ಶೋಕಾಸ್ ನೋಟಿಸ್ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ನೋಡಿದ್ದೇನೆ. ಜನರ ಭಾವನೆಗಳನ್ನು ಎತ್ತಿ ಹಿಡಿದಿದ್ದಕ್ಕೆ ನೋಟಿಸ್ ಎಂಬ ವ್ಯಾಖ್ಯಾನ ಸರಿಯಲ್ಲ ಎಂದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಲೆಕ್ಕಾಚಾರದ ಮಧ್ಯೆ ವ್ಯತ್ಯಾಸಗಳು ಆಗಿರಬಹುದು. ಪ್ರವಾಹದ ವೇಳೆ ಆಗಿರುವಂತ ಮೂಲ ಸೌಕರ್ಯಗಳ ಹಾನಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಕ್ಕೆ 38 ಸಾವಿರ ಕೋಟಿಯಷ್ಟು ನಷ್ಟವಾಗಿದೆ ಎಂದು ನಮ್ಮ ತಂಡ ವರದಿ ನೀಡಿದೆ. ನಮ್ಮ ಬಳಿ ಇದ್ದಷ್ಡು ಹಣದಿಂದ ಈಗಾಗಲೇ ಪರಿಹಾರ ಕೆಲಸಗಳನ್ನು ನಾವೂ ಪ್ರಾರಂಭಿಸಿದ್ದೇವೆ. ಪ್ರಾರಂಭಿಕ ಹಂತದಲ್ಲಿ ಸಂತ್ರಸ್ತರಿಗೆ ಹಾಗೂ ಒಂದಿಷ್ಟು ಮನೆಗಳ ನಿರ್ಮಾಣಕ್ಕೂ ಹಣ ಕೊಟ್ಟಿದ್ದೇವೆ. ಆದರೆ ಶಾಶ್ವತ ಕೆಲಸಗಳನ್ನು ಮಾಡಲು ಭಾರಿ ಮೊತ್ತದ ಹಣದ ಅಗತ್ಯವಿದೆ ಎಂದು ಕೇಂದ್ರ ಸರ್ಕಾರದ ಮಧ್ಯಂತರ ನೆರೆ ಪರಿಹಾರದ ಬಿಡುಗಡೆ ಮೊತ್ತಕ್ಕೆ ಪ್ರತಿಕ್ರಿಯಿಸಿದರು.
ಕುಮಾರಸ್ವಾಮಿ ಯಾವ ಸಂದರ್ಭದಲ್ಲಿ ಏನೇನು ಹೇಳ್ತಾರೆ ಅನ್ನೋದು ಜಗತ್ತಿಗೆ ಗೊತ್ತಿದೆ, ಆ ಬಗ್ಗೆ ನಾನು ವ್ಯಾಖ್ಯಾನ ಕೊಡುವ ಅಗತ್ಯವಿಲ್ಲ. ಹಾಗೆಯೇ ಸಿದ್ದರಾಮಯ್ಯ ಇಷ್ಟು ದಿನ ವ್ಯಾಕರಣ ಮೇಷ್ಟ್ರು ಆಗಿದ್ದವರು ಇದೀಗ ಹಿಸ್ಟರಿ ಮೇಷ್ಟ್ರು ಆಗೋಕೆ ಹೊರಟಿದ್ದಾರೆ. ಇಂತಹ ಹೋಲಿಕೆ ಸಿದ್ದರಾಮಯ್ಯ ರಾಜಕೀಯ ಧೋರಣೆಯನ್ನು ತೋರಿಸುತ್ತದೆ ಎಂದು ಮೋದಿ ಅವರು ಬಿಜೆಪಿ ಅವರಿಗಿಂತ ನನಗೆ ಕ್ಲೋಸ್ ಇದ್ದರು ಎಂಬ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಮೋದಿ ಹಿಟ್ಲರ್ ರಾಜಕಾರಣ ಮಾಡ್ತಿದಾರೆ ಎಂಬ ಸಿದ್ದರಾಮಯ್ಯ ಆರೋಪಗಳಿಗೆ ಟಾಂಗ್ ಕೊಟ್ಟರು.
ರಾಜ್ಯದಲ್ಲಿ ಸಿಎಂ ಪುತ್ರ ಆಡಳಿತ ಮಾಡ್ತಿದಾರೆ ಎಂಬ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಆರೋಪಗಳಿಗೆ ಸಿಎಂ ಪುತ್ರ ಹಾಗೂ ಸಿಎಂ ಎಲ್ಲರೂ ಸ್ಪಷ್ಟನೆ ಕೊಟ್ಟಿದಾರೆ. ನಾವೇ ಆಡಳಿತ ಮಾಡುತ್ತಿರೋದು ಸಂವಿಧಾನೇತರ ವ್ಯಕ್ತಿಗಳು ಯಾರೂ ಆಡಳಿತ ಮಾಡ್ತಿಲ್ಲ ಎಂದರು.
ಮಕ್ಕಳ ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಈ ವರ್ಷದಿಂದಲೇ 7 ನೇ ತರಗತಿಗೆ ಪಬ್ಲಿಕ್ ಪರೀಕ್ಷೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದೇವೆ. ಮುಂದಿನ ಬಾರಿಯಿಂದ ಪೂರ್ಣವಾಗಿ ಅಳವಡಿಸುತ್ತೇವೆ. ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಈ ಕ್ರಮಕ್ಕೆ ಸರ್ಕಾರ ಮುಂದಾಗಿದೆ ಎಂದರು.