ಕುಶಾಲನಗರ/ಕೊಡಗು: ಬಂಡೆ ಕೆಲಸ ಮಾಡಿಕೊಂಡು ಮನೆಯಲ್ಲಿ ಬಡತನ ಇದ್ದರೂ ಸ್ವಾವಲಂಬಿ ಜೀವನ ನಡೆಸಿ ಕರಾಟೆಯಲ್ಲಿ ಬ್ಲ್ಯಾಕ್ ಬೆಲ್ಟ್ ಗಿಟ್ಟಿಸಿಕೊಂಡಿದ್ದ ವ್ಯಕ್ತಿಯೊಬ್ಬ ಈಗ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ.
ಜಿಲ್ಲೆಯ ಕುಶಾಲನಗರ ಸಮೀಪದ ಡೊಡ್ಡತ್ತೂರು ಗ್ರಾಮದ ನಿವಾಸಿ ಶಿವಲಿಂಗ ತಮಗೇ ಅರಿವು ಇಲ್ಲದಂತೆ ಯುಮಟೈಡ್ ಆರ್ಥರೈಟೀಸ್ (ಸಂಧಿವಾತ) ಕಾಯಿಲೆಯಿಂದ ಬಳಲುತ್ತಿದ್ದಾರೆ. ಚೆನ್ನಾಗಿಯೇ ದುಡಿಯುತ್ತಿದ್ದ ಇವರ ಆರೋಗ್ಯದಲ್ಲಿ ದಿಢೀರನೇ ಏರು-ಪೇರು ಕಂಡು ಬಂದಿದೆ. ಶಿವಲಿಂಗ ಆಸ್ಪತ್ರೆಗೆ ಭೇಟಿ ನೀಡಿ ವಿಚಾರಿಸಿದಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಯಮಟೈಡ್ ಆರ್ಥರೈಟೀಸ್ ಮಾರಕ ಕಾಯಿಲೆ ಕಾಣಿಸಿಕೊಂಡಿದೆ ಎಂದು ವೈದ್ಯರು ಹೇಳಿದ್ದರು. ಇದೊಂದು ಬಹುತೇಕ ಗುಣಪಡಿಸಲು ಸಾಧ್ಯವಾಗದ ಕಾಯಿಲೆ ಎಂದು ಅವರು ತಿಳಿಸಿದ್ದಾರೆ.
ದಿನಗಳು ಕಳೆದಂತೆ ಕೈ-ಕಾಲುಗಳು ಸ್ವಾಧೀನ ಕಳೆದುಕೊಳ್ಳುತ್ತಿವೆ. ಜೀವ ಕೋಶಗಳು ನಶಿಸುತ್ತಿವೆ. ವಿಪರೀತ ನೋವಿನಿಂದ ರಾತ್ರಿ ನಿದ್ರೆಯೇ ಬರುವುದಿಲ್ಲ. ಹಾಗೆಯೇ ಕುಟುಂಬಕ್ಕೂ ನಿದ್ರೆಯನ್ನು ಕೊಡುವುದಿಲ್ಲ. ಪ್ರತಿ ತಿಂಗಳು ಆಸ್ಪತ್ರೆಗೆ 15 ಸಾವಿರ ಬೇಕಾಗುತ್ತದೆ. ಅದರಲ್ಲೂ ಲಾಕ್‌ಡೌನ್ ಸಮಯದಲ್ಲಿ ತೀವ್ರ ಸಂಕಷ್ಟ ಅನುಭವಿಸಿದ್ದೇವೆ. ಚಿಕಿತ್ಸೆಗೆ ದೇಹ ಸ್ಪಂದಿಸದಿರುವ ಕಾರಣ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಅಲೋಪತಿ ಚಿಕಿತ್ಸೆಯ ಮೊರೆ ಹೋಗಿದ್ದೇವೆ. ಮನೆಯಲ್ಲಿ ಇಬ್ಬರು ಪುಟ್ಟ ಮಕ್ಕಳು ಹಾಗೂ ಹೆಂಡತಿ ಜೊತೆ ಸಂಕಷ್ಟದ ಜೀವನವನ್ನು ನಡೆಸುತ್ತಿದ್ದೇನೆ. ಜೀವನ ನಿರ್ವಹಣೆಗೆ ಯಾರಾದರೂ ಆರ್ಥಿಕ ನೆರವು ನೀಡಿದರೆ ಅನುಕೂಲವಾಗುತ್ತದೆ ಎಂದು ಕಾಯಿಲೆಗೆ ತುತ್ತಾಗಿರುವ ಶಿವಲಿಂಗ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರೋಗಿಯ ತಂಗಿ ಪವಿತ್ರ, ಅಣ್ಣನಿಗೆ ಬಂದಿರುವ ಸಂಧಿವಾತ ಕಾಯಿಲೆಗೆ ನಾವೂ ಸಾಕಷ್ಟು ಆಸ್ಪತ್ರೆ ಸುತ್ತಿದ್ದೇವೆ. ಮನೆಯಲ್ಲಿ ಸಾಕಷ್ಟು ಬಡತನವಿದೆ. ತಿಂಗಳಿಗೆ ಔಷಧಿಗೆ ಸಾವಿರಾರು ಖರ್ಚಾಗುತ್ತಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.