ಕೊಡಗು: ಕಳೆದ ಮಳೆಯಲ್ಲಿ ಕಾವೇರಿ ನದಿ ಉಕ್ಕಿ ಹರಿದು ಪ್ರವಾಹ ಉಂಟಾಗಿದ್ದ ಸ್ಥಳಗಳಿಗೆ ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾವೇರಿ ನದಿಯಲ್ಲಿ ಹೂಳು ಹಾಗೂ ಮರಳು ತುಂಬಿದ್ದರಿಂದ ಪ್ರವಾಹ ಉಂಟಾಗಿದೆ ಎಂದು ದೂರು ಬಂದ ಹಿನ್ನೆಲೆ, ಜಿಲ್ಲಾಧಿಕಾರಿ ತಮ್ಮ ತಂಡದೊಂದಿಗೆ ವಿರಾಜಪೇಟೆ ತಾಲ್ಲೂಕಿನ ಚೆರಿಯಪರಂಬು ಪೈಸಾರಿಗೆ ಭೇಟಿ ನೀಡಿದ್ದರು. ನದಿಯಲ್ಲಿ ಎಷ್ಟು ಪ್ರಮಾಣದಲ್ಲಿ ಹೂಳು ಹಾಗೂ ಮರಳು ತುಂಬಿದೆ ಎಂಬುದು ನೀರು ತಗ್ಗಿದ ನಂತರ ತಿಳಿಯಲಿದೆ ಎಂದರು.
ಜನವರಿ ನಂತರ ಹೂಳು ಹಾಗೂ ಮರಳು ತೆಗೆಯಲಾಗುವುದು. ಇದಕ್ಕೆ ಸಂಬಂಧಿಸಿದಂತೆ ಈಗಾಗಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಕೆಲವು ದಿನಗಳ ಹಿಂದೆ ಕಾವೇರಿ ನದಿ ಹರಿಯುವ ತಗ್ಗು ಪ್ರದೇಶದಲ್ಲಿ ಪ್ರತಿವರ್ಷ ಸಂಭವಿಸುತ್ತಿರುವ ಪ್ರವಾಹಕ್ಕೆ ಮರಳು ಮಾಫಿಯಾ ಹಾಗೂ ನದಿಯಲ್ಲಿ ಸಮರ್ಪಕವಾಗಿ ಹೂಳು ತೆಗೆಯದಿರುವುದು ಕಾರಣ ಎಂದು ಈಟಿವಿಯಲ್ಲಿ ವರದಿ ಮಾಡಲಾಗಿತ್ತು.