ಮಡಿಕೇರಿ (ಕೊಡಗು): ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಬೋಧಕ ಆಸ್ಪತ್ರೆ ಬಳಿ 29 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ ನಿರ್ಮಾಣ ಕಾಮಗಾರಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದರು ಭಾಗವಹಿಸಿದ್ದರು.
ಈ ವೇಳೆ ಮಾಹಿತಿ ನೀಡಿದ ಇಂಜಿನಿಯರ್ ರಾಜೇಶ್, ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆಯನ್ನು 45 ಸೆಂಟ್ ಜಾಗದಲ್ಲಿ ಬೋಧಕ ಆಸ್ಪತ್ರೆ ಬಳಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಸದ್ಯ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ 450 ಹಾಸಿಗೆ ಆಸ್ಪತ್ರೆ ನವೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ. ಇದಕ್ಕೆ ಈಗಾಗಲೇ 100 ಕೋಟಿ ರೂ. ಬಿಡುಗಡೆಯಾಗಿದ್ದು, ಹೆಚ್ಚುವರಿಯಾಗಿ ಅನುದಾನ ಬೇಕಿದೆ. ‘ಕ್ರಿಟಿಕಲ್ ಕೇರ್ ಯೂನಿಟ್ ಆಸ್ಪತ್ರೆ’ಯ ಕಾಮಗಾರಿಯನ್ನು 15 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
62 ಕಡೆ ಬಿಎಸ್‍ಎನ್‍ಎಲ್ ಟವರ್ ನಿರ್ಮಾಣಕ್ಕೆ ಅನುಮೋದನೆ : ಕೊಡಗು ಜಿಲ್ಲೆಯ 62 ಕಡೆಗಳಲ್ಲಿ ಬಿಎಸ್‍ಎನ್‍ಎಲ್ 4ಜಿ ಟವರ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಇದೇ ನವೆಂಬರ್ ಮೊದಲ ವಾರದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದರು. ಈಗಾಗಲೇ ಕಂದಾಯ ಇಲಾಖೆಯ 6 ಸ್ಥಳಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಕಡೆ ಭೂಮಿ ಕಾಯ್ದಿರಿಸಲಾಗಿದೆ. ಟವರ್ ನಿರ್ಮಾಣ ಮಾಡಿ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ : ಜಿಲ್ಲಾಧಿಕಾರಿ ಕಚೇರಿಯಲ್ಲಿ ಕುಸಿದು ಬಿದ್ದ ವೃದ್ಧೆ.. ಪ್ರಾಥಮಿಕ ಚಿಕಿತ್ಸೆ ನೀಡಿದ ಡಿಸಿ
ಜಿಲ್ಲೆಯ 6 ಕಡೆಗಳಲ್ಲಿ ಮಾತ್ರ ಅರಣ್ಯ ಹಾಗೂ ಅರಣ್ಯ ಪೈಸಾರಿ ಜಾಗದಲ್ಲಿ ಜಾಗ ಕಾಯ್ದಿರಿಸುವ ಸಂಬಂಧ ಅರಣ್ಯ ಇಲಾಖೆ ಮಾಹಿತಿ ನೀಡಲಿದೆ. ಈ 62 ಸ್ಥಳಗಳ ಜೊತೆಗೆ ಪೆರಾಜೆ, ಚೆಂಬು, ಮೇಲ್‍ಚೆಂಬು, ಒಣಚಲು, ವಿ.ಬಾಡಗ ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಟವರ್ ಅಳವಡಿಕೆಗೆ ಬೇಡಿಕೆ ಇದ್ದು, ಈ ಬಗ್ಗೆ ಪ್ರಸ್ತಾವನೆ ಪಡೆದು ಹೆಚ್ಚಿನ ಟವರ್ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ಸಂಚಾರ ನಿಗಮ ವಿಭಾಗದ ಇಂಜಿನಿಯರ್ ಪೊನ್ನುರಾಜು, ಜಿಲ್ಲೆಯ 103 ಗ್ರಾ.ಪಂ ವ್ಯಾಪ್ತಿಯಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕವಿದೆ. ಉಳಿದಂತೆ ಹಲವು ಕಡೆಗಳಲ್ಲಿ 2ಜಿ ಮತ್ತು 3ಜಿ ಒಳಗೊಂಡ ಬಿಎಸ್‍ಎನ್‍ಎಲ್ ಟವರ್ ಇದೆ. ಇವುಗಳನ್ನು 4ಜಿ ಆಗಿ ಪರಿವರ್ತನೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸೆಸ್ಕ್ ಕಾರ್ಯಪಾಲಕ ಎಂಜಿನಿಯರ್ ಅನಿತಾ ಬಾಯಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ತಾ.ಪಂ. ಇಒ ಶೇಖರ್, ಜಯಣ್ಣ, ಅಪ್ಪಣ್ಣ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ : Tungabhadra Dam: ತುಂಗಭದ್ರಾ ಡ್ಯಾಂನಿಂದ ಕಾಲುವೆಗಳಿಗೆ ನೀರು ಬಿಡುಗಡೆ