ಕೊಡಗು : ಮಡಿಕೇರಿ ಜಿಲ್ಲಾ ಆಸ್ಪತ್ರೆ ಮಾಡಿದ ಅವಾಂತರದಿಂದ ವಧು-ವರರು ಮೊದಲ ರಾತ್ರಿಯನ್ನೇ ದೂರ ದೂರವಾಗಿ ಕಳೆದ ಘಟನೆ ನಡೆದಿದೆ.
ಕೊಡಗು ಜಿಲ್ಲೆಯ ಸುಂಟಿಕೊಪ್ಪ ಸಮೀಪದ ಕೆದಕಲ್ನ ರಾಜನ್ ಅವರ ಪುತ್ರಿ ಸಿಮ್ನಾ ಎಂಬುವರ ವಿವಾಹ ಕೇರಳದ ಕಣ್ಣೂರಿನ ಅನೀಷ್ ಎಂಬಾತನೊಂದಿಗೆ ಏ. 25ಕ್ಕೆ ನಿಗದಿಯಾಗಿತ್ತು.
ಈ ನಡುವೆ ಕೊರೊನಾ ಕರಾಳತೆ ತೀವ್ರಗೊಂಡು ಮಾರ್ಗಸೂಚಿ ಜಾರಿಗೊಂಡಿದ್ದರಿಂದ ಮನೆಯವರು ಮದುವೆ ಅನುಮತಿಗಾಗಿ ಜಿಲ್ಲಾಧಿಕಾರಿಗಳ ಕಚೇರಿ ಸಂಪರ್ಕಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ವಧು ಹಾಗೂ ವರನ ಕೋವಿಡ್ ಟೆಸ್ಟ್ ಮಾಡಿಸಲು ಸಲಹೆಯಿತ್ತಿದ್ದಾರೆ. ಅದರಂತೆ ವಧು ಸಿಮ್ನ ಏ. 23 ರಂದು ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದಾರೆ. ಆದರೆ, ರಿಪೋರ್ಟ್ ಬರುವ ಮೊದಲೇ ಮದುವೆ ದಿನಾಂಕ ಬಂದಿದೆ.
ಇತ್ತ ಸೋಂಕು ತಗುಲಿರುವ ಸಾಧ್ಯತೆಯಿಲ್ಲ ಎಂಬ ಧೈರ್ಯದಿಂದ ಮನೆಯವರು ಏ. 25ರಂದು ವಿವಾಹ ಕಾರ್ಯ ನೆರವೇರಿಸಿದ್ದಾರೆ. ಆದರೆ, ಮದುವೆ ಮುಗಿಸಿ ಸಂಜೆ ನವವಧು ಪತಿಯೊಂದಿಗೆ ಕೇರಳಕ್ಕೆ ತೆರಳಿದ್ದಾರೆ.
ಇನ್ನೇನು ಬಾಳ ಸಂಗಾತಿಯ ಮನೆಯ ಹೊಸ್ತಿಲು ತುಳಿಯಬೇಕೆನ್ನುವಷ್ಟರಲ್ಲಿ ಆಕೆಯ ಮೊಬೈಲ್ನಲ್ಲಿ ಮಡಿಕೇರಿಯಲ್ಲಿ ಮಾಡಿಸಿದ ಕೋವಿಡ್ ಪರೀಕ್ಷೆಯ ರಿಸಲ್ಟ್ ಪಾಸಿಟಿವ್ ಎಂಬ ಮೆಸೇಜ್ ವಕ್ಕರಿಸಿತ್ತು.
ಮೆಸೇಜ್ ನೋಡಿದ ನವ ವಧು-ವರ ಆಕಾಶವೇ ಮೈಮೇಲೆ ಬಿದ್ದಂತಾಗಿದ್ದರು. ಈ ಸುದ್ದಿ ಹರಿದಾಡತೊಡಗಿದಾಗ ವರನ ಮನೆಯವರ ಸಮೇತ ಸ್ಥಳೀಯರು ಆತಂಕಕ್ಕೊಳಗಾಗಿ ಸಿಮ್ನಾಳನ್ನು ಮನೆಯೊಳಗೆ ಸೇರಿಸಿಕೊಳ್ಳಲು ಹಿಂದೇಟು ಹಾಕಿದರು.
ಹೀಗಾಗಿ, ಪತಿಯೊಂದಿಗೆ ಇರುಳನ್ನು ಕಳೆಯಬೇಕಾಗಿದ್ದ ನವವಧು ಪ್ರತ್ಯೇಕ ರೂಮಿನಲ್ಲಿ ಕೊರೊನಾವನ್ನು ಶಪಿಸುತ್ತಾ ಒಂಟಿಯಾಗಿ ರಾತ್ರಿ ಸವೆಸಬೇಕಾಯಿತು. ಇತ್ತ ವಿಷಯವರಿತ ಕೆದಕಲ್ನಲ್ಲಿರುವ ಸೀಮ್ನಾ ಮನೆಯವರು ದಂಗುಬಡಿದರು.
ಅತ್ತ ಪತಿಯ ಕಡೆಯವರು ಇಂದು ಕೇರಳದಲ್ಲಿ ಆಕೆಯನ್ನು ಕೊರೊನಾ ಪರೀಕ್ಷೆಗೊಳಪಡಿಸಿದಾಗ ನೆಗೆಟಿವ್ ವರದಿ ಬಂದಿದೆ. ಇದರಿಂದ ಈಗ ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಮಡಿಕೇರಿ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಈ ಮದುವೆಗೆ ಹೋಗಿ ಬಂದವರು ಆತಂಕಕ್ಕೆ ಒಳಗಾಗಿದ್ದಾರೆ.
ಮದುಮಗಳ ಕಡೆಯವರು ಈ ವಿಚಾರವನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಯವರ ಗಮನಕ್ಕೆ ತಂದಿದ್ದು ಸಿಬ್ಬಂದಿ ಸಮಜಾಯಿಸಿಕೊಟ್ಟು ಸುಮ್ಮನಾಗಿದ್ದಾರೆ.