ಕೊಡಗು: ಪ್ರಾಕೃತಿಕ ಸೌಂದರ್ಯದ ಖನಿ ಕೊಡಗು ಕ್ರೀಡೆಗೆ ಹೆಸರಾದ ಜಿಲ್ಲೆ. ಸ್ಥಳೀಯ ಹಂತದಿಂದ ಅಂತಾರಾಷ್ಟ್ರೀಯ ಮಟ್ಟದವರೆಗೆ ಕ್ರೀಡಾಪಟುಗಳನ್ನು ಕಾಣಿಕೆ ನೀಡಿದೆ. ಕ್ರೀಡೆ ಹಾಗೂ ವೈಯಕ್ತಿಕ ಆರೋಗ್ಯವನ್ನು ಜೀವನ ವಿಧಾನವನ್ನಾಗಿ ಮೈಗೂಡಿಸಿಕೊಂಡಿರುವ ಇವರಿಗೆ ಲಾಕ್‌ಡೌನ್ ಎಫೆಕ್ಟ್ ತಟ್ಟಿದೆ.
ಲಾಕ್‌ಡೌನ್ ಘೋಷಿಸಿದರ ಪರಿಣಾಮ ಸಾಕಷ್ಟು ತಿಂಗಳು ಕ್ರೀಡಾಂಗಣ ಹಾಗೂ ಒಳಾಂಗಣ ಕ್ರೀಡಾಂಗಣಗಳು ಬಂದ್ ಆಗಿದ್ದವು. ಇದರಿಂದಾಗಿ ಫಿಟ್ನೆಸ್ ಪಾಕಾಡಿಕೊಳ್ಳಲು ಕ್ರೀಡಾಪಟುಗಳು ಪರಿತಪ್ಪಿಸಬೇಕಾಯಿತು. ಜಿಲ್ಲೆಯಲ್ಲಿ ಕ್ರೀಡೆಗೆ ತನ್ನದೇ ಪ್ರಾಮುಖ್ಯತೆ ಇದೆ. ಮುಂಜಾನೆ ಯುವಕರು ಹಾಕಿ, ಕ್ರಿಕೆಟ್ ಹಾಗೂ ಟೆನ್ನಿಸ್ ಬ್ಯಾಟ್‌ಗಳನ್ನು ಹಿಡಿದು ಕ್ರೀಡಾಂಗಣದಲ್ಲಿ ಕ್ರೀಡಾ ಅಭ್ಯಾಸದಲ್ಲಿ ಮಗ್ನರಾದರೆ, ಹಿರಿಯ ನಾಗರಿಕರು ಸ್ಟೇಡಿಯಂ ಸುತ್ತ ವಾಕಿಂಗ್ ಮಾಡುತ್ತಾ ವಯೋಮಾನಕ್ಕೆ ಅನುಗುಣವಾಗಿ ವರ್ಕೌಟ್ ಮಾಡಿಕೊಂಡು ಮನೆ ಸೇರುತ್ತಿದ್ದರು.
ಯುವಕರು ಈಜುಕೊಳ, ಜಿಮ್, ಯೋಗಾಭ್ಯಾಸ, ಟೇಬಲ್ ಟೆನ್ನಿಸ್, ಧ್ಯಾನ.. ಹೀಗೆ ದೇಹವನ್ನು ಸದೃಢಗೊಳಿಸುವ ಹಾಗೆಯೇ ಮಾನಸಿಕವಾಗಿ ನೆಮ್ಮದಿ ಕಂಡುಕೊಳ್ಳಲು ಒಂದಿಲ್ಲೊಂದು ಅಭ್ಯಾಸದಲ್ಲಿ ತೊಡಗುತ್ತಿದ್ದವರಿಗೆ ಹಲವು ತಿಂಗಳು ಲಾಕ್‌ಡೌನ್ ಎಫೆಕ್ಟ್ ತಟ್ಟಿದೆ. ಮಾರ್ಚ್‌ನಲ್ಲಿ ಕಾಣಿಸಿಕೊಂಡ ಕೊರೊನಾ ಸೋಂಕು ನಿಯಂತ್ರಿಸುವ ಉದ್ದೇಶದಿಂದ ಸರ್ಕಾರ ಲಾಕ್‌ಡೌನ್ ಘೋಷಿಸಿದ ಪರಿಣಾಮ ಅಭ್ಯಾಸನಿರತ ಕ್ರೀಡಾಪಟುಗಳು ಮತ್ತು ಸ್ಟೇಡಿಯಂನಲ್ಲಿ ಬೆವರಿಳಿಸುತ್ತಿದ್ದವರು ಫಿಟ್‌ನೆಸ್ ಕಾಪಾಡಿಕೊಳ್ಳಲು ಪರಿತಪ್ಪಿಸಬೇಕಾಯಿತು.
ಸದ್ಯ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲವಾದ್ದರಿಂದ ಎಲ್ಲವೂ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಜನತೆಗೆ ಬರುವ ಮನಸ್ಸಿದೆ. ಆದರೆ ಕೊರೊನಾ ಭಯದಿಂದ ಹೆದರುತ್ತಿದ್ದಾರೆ. ಒಳಾಂಗಣ ಕ್ರೀಡಾಂಗಣಗಳಾದ ಈಜುಕೊಳ, ಟೇಬಲ್ ಟೆನ್ನಿಸ್, ಟೆನ್ನಿಸ್ ಹಾಗೂ ಜಿಮ್‌ಗಳಿಗೆ ಬೆರಳೆಣಿಕೆಯಷ್ಟು ಜನರು ಬರುತ್ತಿದ್ದಾರೆ ಎನ್ನುತ್ತಾರೆ ಯುವಜನ ಮತ್ತು ಕ್ರೀಡಾ ಇಲಾಖೆಯ ತರಬೇತುದಾರ ಚೇತನ್.