ಮಡಿಕೇರಿ: ಪ್ರತಿ ವರ್ಷದಂತೆ ಈ ಬಾರಿ ಯುಗಾದಿ ಸಂಭ್ರಮ ಅಷ್ಟೇನು ಹೇಳಿಕೊಳ್ಳುವಂತಿಲ್ಲ. ಕೊರೊನಾ ಭೀತಿ ಹಾಗೂ ಸಾರಿಗೆ ಮುಷ್ಕರದಿಂದ ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳ ಖರೀದಿಯ ಭರಾಟೆ ಕಾಣುತ್ತಿಲ್ಲ. ವಸ್ತುಗಳ ಬೆಲೆಗಳು ಗಗನಕ್ಕೇರಿರುವುದು ಯುಗಾದಿ ಸಂಭ್ರಮ ಕಳೆಗುಂದುವಂತೆ ಮಾಡಿದೆ.
ಯುಗಾದಿ ಅಂದರೆ ಅದು ಹೊಸ ವರ್ಷದ ಸಂಭ್ರಮ. ಹಳೆಯ ಕಹಿ ಘಟನೆ ಮರೆತು ಹೊಸತನಕ್ಕೆ ಕಾಲಿಡುವ ದಿನ. ದೂರ ದೂರದ ಊರುಗಳಿಂದ ನೆಂಟರೆಲ್ಲರೂ ಬಂದು ಒಟ್ಟಾಗಿ ಹಬ್ಬ ಆಚರಿಸಿ ಎಳ್ಳು-ಬೆಲ್ಲ ಸವಿದು ಕಹಿ ಘಟನೆಯನ್ನು ಈ ಹಬ್ಬದಂದು ಮರೆಯುವ ದಿನ. ಆದ್ರೆ ಕೊರೊನಾ ಮತ್ತು ಸಾರಿಗೆ ನೌಕರರ ಮುಷ್ಕರ ಇವೆಲ್ಲವೂ ಈ ಬಾರಿಯ ಯುಗಾದಿ ಹಬ್ಬದ ಸಂಭ್ರಮಕ್ಕೆ ಅಡ್ಡಿಯಾಗಿವೆ.
ಹೂವಿನ ಬೆಲೆ ದುಪ್ಪಟ್ಟಾಗಿದ್ದು, ಜನರು ಹೂವು ಖರೀದಿಸಲು ಕೂಡ ಹಿಂದೇಟು ಹಾಕುತ್ತಿದ್ದಾರೆ. ಆದ್ರೆ ಜನರು ಬಂದ್ರೆ ಮಾತ್ರ ನಮಗೆ ವ್ಯಾಪಾರ ಅಂತಿದ್ದಾರೆ ವ್ಯಾಪಾರಸ್ಥರು. ಇನ್ನೂ ಹಬ್ಬಗಳ ಸಮಯಕ್ಕೆ ಬೇರೆ ಊರುಗಳಿಂದ ಜಿಲ್ಲೆಗೆ ಹೂ ಮಾರುವ ವ್ಯಾಪಾರಿಗಳು ಹೆಚ್ಚು ಬರುತ್ತಿದ್ದರು. ಆದರೆ, ಈ ಬಾರಿ ಬಸ್ ಇಲ್ಲದಿರುವುದರಿಂದ ಯಾರೂ ಕೂಡ ಬರಲು ಸಾಧ್ಯವಾಗಿಲ್ಲ.
ಇದನ್ನೂ ಓದಿ: ನವೋಲ್ಲಾಸದ ಸಂಕೇತವೇ ಯುಗಾದಿ... ಚೈತ್ರ ಮಾಸದ ಮೊದಲ ದಿನದ ಸಂಭ್ರಮ ಹೀಗಿರಲಿ!
ಅಗತ್ಯ ವಸ್ತುಗಳ ಬೆಲೆ ಕೂಡ ಏರಿಕೆಯಾಗಿದೆ. ಆದ್ರೆ ಹಬ್ಬ ಮಾಡಬೇಕಲ್ವ ಎಂದು ಅಷ್ಟೋ ಇಷ್ಟು ವಸ್ತುಗಳನ್ನು ಖರೀದಿಸಿ ಹಬ್ಬ ಮಾಡುತ್ತಿದ್ದೇವೆ. ಬೆಲೆ ಏರಿಕೆಯಾಗಿರೋದ್ರಿಂದ ಎಲ್ಲೋ ಒಂದು ಕಡೆ ಹಬ್ಬದ ಸಂಭ್ರಮ ಕುಗ್ಗಿ ಹೋದ ರೀತಿಯಲ್ಲಿ ಕಂಡು ಬರತ್ತಿದೆ ಅಂತಿದ್ದಾರೆ ಗ್ರಾಹಕರು.