ಕೊಡಗು: ಅದು ಪ್ರಕೃತಿಯಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿಕೊಂಡು ಸ್ವಚ್ಛಂದವಾಗಿ ಜೀವಿಸಿತ್ತು. ಎಲ್ಲೆಂದ್ರಲ್ಲಿ ತೃಪ್ತಿ ಆಗುವಷ್ಟು ಆಹಾರ ತಿನ್ನುತ್ತಾ ಸುತ್ತಲ ಹಳ್ಳಿಗರಿಗೆ ಆತಂಕ ಮೂಡಿಸಿತ್ತು. ನಾನು ನಡೆದದ್ದೇ ದಾರಿ ಎಂದು ಬೀಗುತ್ತಿದ್ದ ಮದಗಜ ಇದೀಗ ಮಾವುತರ ಬಂಧಿಯಾಗಿದೆ.
ಹೌದು, ಸೊಮವಾರಪೇಟೆ ತಾಲೂಕಿನ ಸಿದ್ದಾಪುರ, ಮೊದೂರು ಸುತ್ತಮುತ್ತಲು ಸ್ಥಳೀಯರಿಗೆ ಭಯ ಸೃಷ್ಟಿಸಿ ಪ್ರಾಣಹಾನಿ ಉಂಟುಮಾಡಿದ್ದ ಪುಂಡಾನೆಯನ್ನು ಮಾವುತರು ಬಂಧನದಲ್ಲಿಟ್ಟು ಪಳಗಿಸುತ್ತಿದ್ದಾರೆ. ಕುಶಾಲನಗರ ಸಮೀಪದ ದುಬಾರೆ ಸಾಕಾನೆ ಶಿಬಿರಕ್ಕೆ ಉಪಟಳ ನೀಡುತ್ತಿದ್ದ ಆನೆಯನ್ನು ಕರೆತಂದು ನೀತಿಪಾಠ ಹೇಳಿ ಕೊಡುತ್ತಿದ್ದಾರೆ.
ಆನೆಗೆ ಮಾವುತರು ಹಾಗೂ ಕಾವಾಡಿಗಳು ಸಜ್ಞೆ ಹಾಗೂ ಮಾತುಗಳನ್ನು ಅರ್ಥೈಸುತ್ತಿದ್ದಾರೆ. ಅದಿ, ಆದ ಸರಕ್, ಸಲಾಂ, ಮುಂದೆ ಹೋಗು, ಹಿಂದೆ ಬಾ, ಮರದ ದಿಮ್ಮಿಗಳನ್ನು ಎತ್ತಿಕೋ, ಆಹಾರ ತಿನ್ನು, ನಮಸ್ಕರಿಸು ಎಂದೆಲ್ಲಾ ಸಂಸ್ಕಾರದ ಪಾಠವನ್ನು ಅದಕ್ಕೆ ಕಲಿಸುತ್ತಿದ್ದಾರೆ. ಬಂಧಿಯಾದ ಆನೆ ಅಸಹಾಯಕತೆ ಒಪ್ಪಿಕೊಂಡು ಮಾವುತನ ಮಾತಿಗೆ ತಲೆದೂಗುತ್ತಿದೆ.
ಆನೆಗೆ ಮಿತ ಆಹಾರ...
ಬುದ್ಧಿ ಕೇಳೋವರೆಗೆ ಮದಗಜನಿಗೆ ಮಿತ ಆಹಾರ ಕೊಡಲಾಗುತ್ತದೆ. ಪ್ರತಿನಿತ್ಯ 10 ಕೆ.ಜಿ ಭತ್ತ, 10 ಕಂತೆ ನೆಲ್ಲುಲ್ಲು, 250 ಗ್ರಾಂ ಬೆಲ್ಲ, 2 ಕಂತೆ ಸೊಪ್ಪು, ನೀರು ಹಾಗೂ 2 ಕಟ್ಟು ಕಬ್ಬನ್ನು ಕೊಡಲಾಗುತ್ತಿದೆ. ಪಳಗಿಸುವ ವೇಳೆ ಚಿಕ್ಕ-ಪುಟ್ಟ ಗಾಯಗಳಿಗೆ ಔಷಧವನ್ನು ಸವರುತ್ತಾರೆ. ಇನ್ನು ಅದಕ್ಕೆ ಕೊಡ್ತಿರೊ ಊಟ, ಗುಡಾಣದಂತಿರೊ ಅದರ ಹೊಟ್ಟೆಗೆ ಅರೆಕಾಸಿನ ಮಂಜಿಗೆಯಂತಾಗಿದೆ.
ಕಬ್ಬಿಣ ಕಾದಾಗಲೇ ಬಡಿಯಬೇಕು ಎನ್ನುವ ಗಾದೆ ಮಾತಿನಂತೆ ಅದನ್ನು ಸಂಪೂರ್ಣ ಪಳಗಿಸುವವರೆಗೂ ಮಾವುತ ಅಲ್ಲೇ ಇದ್ದು ಮುತುವರ್ಜಿಯಿಂದ ಕೆಲಸ ಮಾಡುತ್ತಾನೆ. ಮಲೆನಾಡು ಭಾಗದಲ್ಲಿ ವನ್ಯಜೀವಿಗಳು ಹಾಗೂ ಮಾನವನ ನಡುವೆ ಸಂಘರ್ಷ ತಪ್ಪಿದ್ದಲ್ಲ. ಪ್ರಾಣಿಗಳ ಮೂಲ ನೆಲೆಯಲ್ಲಿ ತನ್ನ ನೆಲೆ ಗುರುತಿಸಿಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಒಟ್ಟಿನಲ್ಲಿ ಇಷ್ಟು ದಿನಗಳು ವ್ಯಾಪ್ತಿಯ ಜನರನ್ನು ನಿದ್ದೆಗೆಡಿಸಿದ್ದ ತುಂಟಾನೆ ಇದೀಗ ಮಾವುತನ ಅಂಕುಶಕ್ಕೆ ಸಿಕ್ಕಿದೆ.