ಕೊಡಗು: ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಬೆಳಗ್ಗೆಯಿಂದ ಜಿಲ್ಲೆಯಾದ್ಯಂತ ಮಳೆ ಆಗುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಎದುರಾಗಿದೆ.
ಕೊಡಗಿನಲ್ಲಿ ಬುಧವಾರ ಮಧ್ಯಾಹ್ನದ ನಂತರ ಗುಡುಗು ಸಹಿತ ಮಳೆಯಾಗಿತ್ತು. ರಾತ್ರಿ ಕೂಡ ಮಳೆ ಮುಂದುವರೆದಿತ್ತು. ಇಂದು ಬೆಳಗ್ಗೆಯಿಂದ ಚಳಿ ಹಾಗೂ ಮೋಡ ಕವಿದ ವಾತಾವರಣವಿದ್ದು, ಹಲವೆಡೆ ಸಾಧಾರಣ ಮಳೆಯಾಗುತ್ತಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಸೋಮವಾರಪೇಟೆ ಸಮೀಪದ ಮಕಂದೂರು ಬಳಿ ಗುಡ್ಡ ಕುಸಿದಿತ್ತು. ಪರಿಣಾಮ ಮಡಿಕೇರಿ-ಸೋಮವಾರಪೇಟೆ ರಸ್ತೆ ಸಂಚಾರ ಬಂದ್ ಆಗಿದೆ. ಈ ಹಿನ್ನೆಲೆ ವಾಹನ ಸವಾರರು ಪರ್ಯಾಯ ಮಾರ್ಗ ಬಳಸಬೇಕಾಯಿತು. ಇದೀಗ ಜಿಲ್ಲಾಡಳಿತ ಬಿದ್ದಿದ್ದ ಮಣ್ಣನ್ನು ತೆರವುಗೊಳಿಸಿ, ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಒಟ್ಟಿನಲ್ಲಿ, ಜಿಲ್ಲೆಯಲ್ಲಿ ಮತ್ತೆ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜನತೆ ಭಯದಲ್ಲೇ ಬದುಕುವಂತಾಗಿದೆ.