ಕೊಡಗು: ಜಿಲ್ಲೆಯಲ್ಲಿ ತಾಪಮಾನ ಹೆಚ್ಚಾಗುತ್ತಿದೆ. ಕಾಫಿ, ಮೆಣಸು, ಹೂ-ಹಣ್ಣು ಗಿಡಗಳು ಒಣಗಿ ಹೋಗುತ್ತಿವೆ. ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೇಸಿಗೆಯಿಂದ ಜಿಲ್ಲೆಯ ಕೆಲವು ಭಾಗಗಳಲ್ಲಿ ನೀರಿನ ಅಭಾವ ಉಂಟಾಗಿದ್ದು ಕಾಫಿ ಬೆಳೆಗಾರರಿಗೆ ದಿಕ್ಕು ತೋಚದಂತಾಗಿದೆ. ಜಿಲ್ಲೆಯಲ್ಲಿ ಈ ವೇಳೆಗೆ ಮಳೆಯಾಗಬೇಕಿತ್ತು. ಆದರೆ ಇನ್ನೂ ಮಳೆಯಾಗದ ಕಾರಣ ಭೂಮಿ ಸಂಪೂರ್ಣ ಒಣಗಿದೆ. ಕಾಫಿ, ಕಾಳುಮೆಣಸು ಗಿಡಗಳು ಚಿಗುರೊಡೆಯಲು ತೇವಾಂಶವೇ ಇಲ್ಲದಂತಾಗಿದೆ.
ಕಾಫಿ ಹೂ ಬಿಡುವ ಸಮಯದಲ್ಲಿ ಉತ್ತಮ ಮಳೆಯಾಗದೇ ಇದ್ದರೆ ಮುಂದಿನ ಬಾರಿಯ ಫಸಲಿಗೆ ಹೊಡೆತ ಬೀಳುತ್ತದೆ. ಮಳೆ ಅಭಾವ ಮೆಣಸಿನ ಬೆಳೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ. ಮಳೆ ಸರಿಯಾಗಿ ಆಗದಿದ್ದರೆ ಬೆಳೆಗಾರರು ಸಹಜವಾಗಿ ನಷ್ಟ ಅನುಭವಿಸಬೇಕಾಗುತ್ತದೆ. ತೋಟಗಳು ಬೋರಾರ್ ರೋಗಕ್ಕೆ ತುತ್ತಾಗುವುವ ಪರಿಸ್ಥಿತಿ ಎದುರಾಗುತ್ತದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಬಹುಪಾಲು ಬೆಳೆಗಾರರು ಕಾಫಿಗೆ ಮಳೆಯನ್ನೇ ಆಶ್ರಯಿಸಿದ್ದಾರೆ. ಬೆರಳೆಣಿಕೆಯಷ್ಟು ಜನ ಮಾತ್ರ ಕೃಷಿ ಹೊಂಡ, ಕೊಳವೆ ಬಾವಿ ವ್ಯವಸ್ಥೆ ಮಾಡಿಕೊಂಡಿದ್ದು, ತೋಟಕ್ಕೆ ಸ್ಪಿಂಕ್ಲಿಂಗ್ ಅಳವಡಿಸಿಕೊಂಡಿದ್ದಾರೆ. ಅಂತಹ ತೋಟಗಳಲ್ಲಿ ಮಾತ್ರ ಕಾಫಿ ಹೂ ಅರಳಿವೆ. ಉಳಿದ ತೋಟಗಳು ಮಳೆಯಿಲ್ಲದೇ ಸೊರಗಿ ನಿಂತಿವೆ. ಕೊಡಗಿನಲ್ಲಿ ಕಾಫಿ, ಕಾಳು ಮೆಣಸು ಪ್ರಮುಖ ಬೆಳೆಯಾಗಿದ್ದು, ಮಳೆ ಆಧರಿಸಿದ ಬೆಳೆಗಾರರ ಸ್ಥಿತಿ ಶೋಚನೀಯವಾಗಿದೆ.
ಹೊಳೆ, ಕೆರೆ-ಕಟ್ಟೆಗಳು ಒಣಗಿವೆ. ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ. ಮಾರ್ಚ್ ಕೊನೆಯಲ್ಲಿ ಆರಂಭವಾಗುವ ರೇವತಿ ಮಳೆ ವಾಣಿಜ್ಯ, ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳಿಗೆ ಪ್ರಮುಖ ಆಧಾರ. ಕಳೆದ ಹಲವಾರು ವರ್ಷಗಳಿಂದ ಮಾರ್ಚ್ ಅಂತ್ಯ ಹಾಗೂ ಏಪ್ರಿಲ್ ಆರಂಭದಲ್ಲಿ ಸುಮಾರು 4 ಇಂಚು ಮಳೆ ಬೀಳುತ್ತಿದ್ದರಿಂದ ಕಾಫಿ ಹೂ ಕಟ್ಟುತ್ತಿತ್ತು. ಈ ಬಾರಿ ಕೆಲವು ದಿನಗಳ ಹಿಂದೆ ಅರ್ಧ ಇಂಚಿಗೂ ಕಡಿಮೆ ಮಳೆಯಾಗಿದೆ. ಆದರೆ ಮತ್ತೆ ಮಳೆಯ ಸುಳಿವೇ ಇಲ್ಲವಾಗಿರುವುದರಿಂದ ಕಾಫಿ ಬಲವಂತವಾಗಿ ಹೂ ಕಟ್ಟಿ ಮಾಗುವ ಮುನ್ನವೇ ಬಿಸಿಲ ಝಳಕ್ಕೆ ಸುಟ್ಟು ಹೋಗುತ್ತಿವೆ.
ಕಾಫಿ ಬೆಳೆಗಾರ್ತಿ ಕುಸುಮ ಚಂದ್ರಶೇಖರ್ ಮಾತನಾಡಿ, "ಜಿಲ್ಲೆಯಲ್ಲಿ ಹೆಚ್ಚಿದ ಬಿಸಿಲಿನ ತಾಪದಿಂದ ಕಾಫಿಯನ್ನೇ ನಂಬಿ ಜೀವನ ನಡೆಸುತ್ತಿರುವ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಿಸಿಲಿನ ತಾಪದಿಂದ ದನ, ಕರುಗಳಿಗೆ ಕುಡಿಯಲು ಸಹಾ ನೀರಿಲ್ಲದಂತಾಗಿದೆ. ಅಂತರ್ಜಲದ ಮಟ್ಟ ಕಡಿಮೆಯಾಗಿರುವುದರಿಂದ ಕಾಫಿ, ಮೆಣಸು, ಹೂವು-ಹಣ್ಣಿನ ಗಿಡಗಳು ಒಣಗಿ ಹೋಗುತ್ತಿವೆ. ಈ ಬಾರಿ ಸರಿಯಾಗಿ ಮಳೆಯಾಗದಿದ್ದರೆ ಮುಂದಿನ ವರ್ಷ ಕಾಫಿ, ಮೆಣಸಿನ ಫಸಲು ಬರುವುದಿಲ್ಲ" ಎಂದು ಆತಂಕ ವ್ಯಕ್ತಪಡಿಸಿದರು.
ಕಾಫಿ ಬೆಳೆಗಾರ ಚೋನಿರ ಕೆ. ಸತ್ಯ ಮಾತನಾಡಿ, "ದಿನೇ ದಿನೇ ಹೆಚ್ಚಾಗುತ್ತಿರುವ ತಾಪಮಾನದಿಂದ ಕಾಫಿ, ಮೆಣಸು ಬೆಳೆಗಾರರಿಗೆ ತೊಂದರೆಯಾಗುತ್ತಿದೆ. ಕೆರೆ, ಬಾವಿಗಳಲ್ಲಿ ನೀರು ಬತ್ತಿಹೋಗುತ್ತಿದ್ದು, ಕಾಫಿ ಗಿಡಗಳು ಸೊರಗಿ ಹೋಗುತ್ತಿವೆ, ಮುಂದೆ ಗಿಡಗಳು ಉಳಿಯುತ್ತದೆಯೇ ಎಂಬ ಪರಿಸ್ಥಿತಿ ಉಂಟಾಗಿದೆ. ಈ ವೇಳೆಗೆ ಮುಂಗಾರು ಮಳೆಯಾಗಬೇಕಿತ್ತು, ಮುಂದಿನ ತಿಂಗಳಾದರೂ ಮಳೆಯಾಗುತ್ತದೆ ಎಂಬ ಆಶಾಭಾವನೆಯಲ್ಲಿ ಬೆಳೆಗಾರರಿದ್ದಾರೆ" ಎಂದರು.
ಇದನ್ನೂ ಓದಿ: ಅತಂತ್ರ ಸ್ಥಿತಿಯಲ್ಲಿ ಕರ್ನಾಟಕದ ಕಾಫಿ ಘಮಲು: ಈ ಬಾರಿಯಾದರೂ ಬೇಡಿಕೆಗಳನ್ನು ಈಡೇರಿಸುತ್ತಾ ಆಳುವ ಸರ್ಕಾರ!