ಕೊಡಗು : ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಅಕಾಲಿಕ ಮಳೆಯು ಜಿಲ್ಲೆಯ ಕಾಫಿ ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ. ಕಾಫಿ ಕೊಯ್ಲು ಮಾಡುವ ಸಮಯದಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಬೆಳೆದ ಬೆಳೆ ಕೈ ಹಿಡಿಯದಂತಾಗಿದೆ. ಈ ಹಿಂದೆ ಕಾಡು ಪ್ರಾಣಿಗಳು ಹಾವಳಿ, ಭಾರಿ ಮಳೆಗೆ ತತ್ತರಿಸಿಹೋಗಿದ್ದ ಕಾಫಿ ಬೆಳೆಗಾರರು, ಇದೀಗ ತಮ್ಮ ಅಳಿದುಳಿದ ಕಾಫಿ ಬೆಳೆಯನ್ನು ಕೊಯ್ಲು ಮಾಡಿ ಒಣಗಿಸುವ ಸಂದರ್ಭದಲ್ಲಿ ಅಕಾಲಿಕ ಮಳೆಯಾಗುತ್ತಿರುವುದು ಜಿಲ್ಲೆಯ ರೈತರನ್ನು ಚಿಂತೆಗೀಡು ಮಾಡಿದೆ.
ಕೊಡಗಿನ ಬಹುತೇಕ ಎಲ್ಲಾ ತೋಟದಲ್ಲಿ ರೈತರು ಕಾಫಿ ಬೆಳೆಯನ್ನು ಕೊಯ್ಲು ಮಾಡುತ್ತಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ಅರೇಬಿಕಾ ಕಾಫಿ ಹಣ್ಣಾಗಿದೆ. ಪರಿಣಾಮ ಇದೀಗ ಅವಧಿಗೂ ಮೊದಲೇ ಕಾಫಿ ಕೊಯ್ಲು ಮಾಡಬೇಕಾದ ಅನಿವಾರ್ಯತೆ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಎದುರಾಗಿದೆ.
ಸಾಮಾನ್ಯವಾಗಿ ಡಿಸೆಂಬರ್ ಅಂತ್ಯದಲ್ಲಿ ಕಾಫಿ ಬೆಳೆ ಕೊಯ್ಲಿಗೆ ಬರುತ್ತಿತ್ತು. ಆದರೆ ಈ ವರ್ಷ ಅಕ್ಟೋಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಅರೇಬಿಕಾ ಕಾಫಿ ಹಣ್ಣಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಅರೇಬಿಕಾ ಕಾಫಿ ಕೊಯ್ಲು ಆರಂಭಗೊಂಡಿದೆ. ಅರೇಬಿಕಾ ಕಾಫಿ ಅವಧಿಗೂ ಮೊದಲೇ ಹಣ್ಣಾಗಿರುವುದರಿಂದ, ಕಾಫಿ ಬೆಳೆಗಾರರಿಗೆ ಕೊಯ್ಲು ಮಾಡಲೇ ಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು, ಕಾಫಿ ಬೆಳೆ ಕೊಯ್ಲು ಮಾಡಲು ಬರುವ ಕಾರ್ಮಿಕರಿಗೆ ದಿನಕ್ಕೆ 400 ರಿಂದ 450 ರೂ ಸಂಬಳ ನೀಡಬೇಕಿದ್ದು, ಇದು ಬೆಳೆಗಾರರಿಗೆ ಹೊರೆಯಾಗಿ ಪರಿಣಮಿಸಿದೆ.
ಇನ್ನು, ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುತ್ತಿದೆ. ಇದರಿಂದ ಅರೇಬಿಕಾ ಕಾಫಿ ಹಣ್ಣಾಗಿ ಕೊಯ್ಲು ಮಾಡಿದ ಕಾಫಿ ಒಣಗಿಸಲು ಬೆಳೆಗಾರರು ಹರಸಾಹಸ ಪಡುವಂತಾಗಿದೆ. ಅಕಾಲಿಕ ಮಳೆ, ಹವಾಮಾನ ವೈಪರೀತ್ಯ, ಕಾರ್ಮಿಕ ಕೊರತೆ, ಸೂಕ್ತ ಬೆಲೆ ಸಮಸ್ಯೆ, ಇದರ ನಡುವೆ ಅವಧಿಗೂ ಮುನ್ನವೇ ಅರೇಬಿಕಾ ಕಾಫಿ ಹಣ್ಣಾಗಿರುವುದು, ಜಿಲ್ಲೆಯ ಕಾಫಿ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಇದನ್ನೂ ಓದಿ : ಚಿಕ್ಕಮಗಳೂರು: ಅಕಾಲಿಕ ಮಳೆಗೆ ಕೊಚ್ಚಿ ಹೋದ ಕಾಫಿ ಬೆಳೆ