(ಕುಶಾಲನಗರ) ಕೊಡಗು: ಮಹಾಮಳೆಯಿಂದ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲೆಗೆ ಕೇಂದ್ರ ಅಧ್ಯಯನ ತಂಡ ಭೇಟಿ ನೀಡಿದ್ದು, ತಂಡಕ್ಕೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡುತ್ತಿದ್ದಾರೆ.
ಕುಶಾಲನಗರ ಸಮೀಪದ ಕೂಡಿಗೆ ಸೈನಿಕ ಶಾಲೆಗೆ ಕೇಂದ್ರ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ನೇತೃತ್ವದ ಅಧ್ಯಯನ ತಂಡ ಆಗಮಿಸಿದ್ದು, ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಸಂಭವಿಸಿದ ಆಸ್ತಿ-ಪಾಸ್ತಿ, ಮನೆಗಳು ಸೇರಿದಂತೆ ಜೀವಹಾನಿ ಕುರಿತು ಪರಿಶೀಲಿಸುತ್ತಿದೆ. ಕೇಂದ್ರ ಹಣಕಾಸು ಸಚಿವಾಲಯದ ಅಧಿಕಾರಿ ಡಾ. ಭಾರ್ತೇಂದು ಕುಮಾರ್ ಸಿಂಗ್ ಅವರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಜಿಲ್ಲೆಯ ಪ್ರಾಕೃತಿಕ ವಿಕೋಪದ ಪರಿಣಾಮವನ್ನು ವಿವರಿಸುತ್ತಿದ್ದಾರೆ. ಈ ಸಂಬಂಧ ಸೈನಿಕ ಶಾಲೆಯಲ್ಲಿ ಅಧಿಕಾರಿಗಳು ಸಭೆ ನಡೆಸುತ್ತಿದ್ದು, ಸಭೆಯ ಬಳಿಕ ಪ್ರವಾಹ ಪೀಡಿತ ಹಾಗೂ ಭೂ ಕುಸಿತದ ಸ್ಥಳಗಳಿಗೆ ಭೇಟಿ ನೀಡಲಿದ್ದಾರೆ.