ಮಡಿಕೇರಿ: ಬಿಜೆಪಿ ಸರ್ಕಾರದಲ್ಲಿ ಕೊವೀಡ್-19 ಅವಧಿಯಲ್ಲಿ ಮಾಸ್ಕ್, ಕಿಟ್ ಹಾಗೂ ಸ್ಯಾನಿಟೈಸರ್ ಸೇರಿದಂತೆ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಪಕ್ಷದ ವತಿಯಿಂದ ರಾಜ್ಯದ ಜನತೆಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಹೇಳಿದರು.
ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿಂದ ಕಾಂಗ್ರೆಸ್ ಪಕ್ಷದಿಂದ ಕೊವೀಡ್ ಸಂದರ್ಭದಲ್ಲಿ ಸಂಪೂರ್ಣ ಸಹಕಾರ ಕೊಟ್ಟಿದ್ದರೂ, ಅವರಲ್ಲೇ ಒಮ್ಮತವಿಲ್ಲ. ಕೊವೀಡ್ ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಅವರ ಮಂತ್ರಿಗಳಲ್ಲೇ ಸಮನ್ವಯ ಇಲ್ಲ. ವೈದ್ಯಕೀಯ ಶಿಕ್ಷಣ ಸಚಿವರು ಒಂದು ಹೇಳಿಕೆ ಹಾಗೆಯೇ ಆರೋಗ್ಯ ಸಚಿವರು ಮತ್ತೊಂದು ರೀತಿ ಹೇಳುತ್ತಾರೆ. ಹೊರ ರಾಜ್ಯದ ಕೂಲಿ ಕಾರ್ಮಿಕರು ತಮ್ಮ ಹುಟ್ಟೂರಿಗೆ ತೆರಳಲು ಯಾತನೆ ಅನುಭವಿಸಿದ್ದಾರೆ. ಈ ಸರ್ಕಾರಕ್ಕೆ ಕಾರ್ಮಿಕರ ಬಗ್ಗೆ ಕಾಳಜಿಯೇ ಇಲ್ಲ. ಬಸ್ ನಿಲ್ದಾಣದಲ್ಲಿ ವಲಸೆ ಕಾರ್ಮಿರನ್ನು ಸಾರಿಗೆ ವೆಚ್ಚಕ್ಕೆ ಕಾಂಗ್ರೆಸ್ ವತಿಯಿಂದ 1 ಕೋಟಿ ಕೊಡುವುದಾಗಿ ಘೋಷಿಸಿದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚಿಕ್ಕ ರಾಜ್ಯಗಳಾದ ತೆಲಂಗಾಣ ರಾಜ್ಯ 35 ಸಾವಿರ ಕೋಟಿ, ಹಾಗೆ ಕೇರಳ 20 ಸಾವಿರ ಕೋಟಿ ಪ್ಯಾಕೇಜ್ ಘೋಷಿಸಿವೆ. ಅದರಂತೆ ಸರ್ವಪಕ್ಷ ಸಭೆಯಲ್ಲೂ ರಾಜ್ಯಕ್ಕೆ ಕನಿಷ್ಠ 50 ಲಕ್ಷ ಪರಿಹಾರ ಪ್ಯಾಕೇಜ್ ಕೊಡುವಂತೆ ಮನವಿ ಮಾಡಿದ್ದರೂ ಅದೂ ನೆರವೇರಲಿಲ್ಲ. ಕೊವೀಡ್-19 ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರಧಾನಿ ನರೇಂದ್ರ ಮೋದಿಯವರ ಘೋಷಿಸಿರುವ ಪರಿಹಾರ ಸುಳ್ಳು ಆಶ್ವಾಸನೆ ಆಗಿದೆ. ಕಳೆದ ಚುನಾವಣೆಯಲ್ಲಿ ದೇಶದ ಜನತೆಗೆ ಹೀಗೆ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ರಾಜಕೀಯ ಮಾಡಲು ಹೊರಟಿವೆ ಎಂದು ಆರೋಪಿಸಿದರು.
ಪಕ್ಷದಿಂದ ಮುಂದಿನ ಹೋರಾಟವನ್ನು ರೂಪಿಸುವ ಉದ್ದೇಶದಿಂದ ಜೂ.7 ರಂದು ಬೆಂಗಳೂರಿನಲ್ಲಿ ಕೆಪಿಸಿಸಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಪದ ಗ್ರಹಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಕೊವೀಡ್ 19 ಪರಿಣಾಮ ಕೇವಲ 150 ಜನರು ಸೇರಲಿದ್ದಾರೆ. ಇದೊಂದು ವಿನೂತನ ಕಾರ್ಯ ಕ್ರಮವಾಗಿದೆ. ಎಲ್ಲಾ ಪಂಚಾಯಿತಿಗಳು ಹಾಗೂ ವಾರ್ಡ್‌ಗಳು ಸೇರಿದಂತೆ ಸುಮಾರು 8 ಸಾವಿರ ಪ್ರದೇಶಗಳಲ್ಲಿ ಜೂಮ್ ಆ್ಯಪ್ ಮೂಲಕ ಪಕ್ಷದ ಕಾರ್ಯಕರ್ತರು ನೇರ ಪ್ರಸಾರದ ಮೂಲಕ ಭಾಗವಹಿಸುವರು ಎಂದು ತಿಳಿಸಿದರು.