ಕೊಡಗು: ಸಹಜ ಸಾವು ಎಂದು ನಂಬಿಸಿ ಕೊಲೆಯನ್ನು ಮುಚ್ಚಿಹಾಕಲು ಹೊರಟಿದ್ದ ಪ್ರಕರಣವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಇಲ್ಲಿ ತಂಗಿಯೇ ಅಣ್ಣನನ್ನು ಹತ್ಯೆ ಮಾಡಿದ್ದಾಳೆ. ಅಣ್ಣನಿಗೆ ನಿದ್ರೆ ಮಾತ್ರೆ ನೀಡಿ, ಬಳಿಕ ಸ್ನೇಹಿತರ ಸಹಾಯದಿಂದ ಕೊಲೆ ಮಾಡಿದ್ದಾಳೆ. ಈ ಘಟನೆ ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂದರನಗರ ಗ್ರಾಮದಲ್ಲಿ ನಡೆದಿದೆ.
ಸುಂದರನಗರ ಗ್ರಾಮದ ಮಾದೇವಮ್ಮ ಅವರಿಗೆ ಇಬ್ಬರು ಮಕ್ಕಳು. ಪುತ್ರಿ ಭವ್ಯ ಮದುವೆಯಾಗಿದ್ದರೂ ಪತಿಯನ್ನು ತೊರೆದು ತಾಯಿ ಮನೆಯಲ್ಲಿ ಇಬ್ಬರು ಮಕ್ಕಳೊಂದಿಗೆ ವಾಸ ಮಾಡುತ್ತಿದ್ದಳು. ಮಾದೇವಮ್ಮ ಮನೆಯಲ್ಲಿ ಇಲ್ಲದಿದ್ದಾಗ ಕೋಣೆಯಲ್ಲಿ ಮಲಗಿದ್ದ ಸಹೋದರ ಸುರೇಶ್ಗೆ ಭವ್ಯ ನಿದ್ರೆ ಮಾತ್ರೆ ನೀಡಿದ್ದಾಳೆ. ಬಳಿಕ ಸ್ನೇಹಿತರಾದ ಹರೀಶ್ ಹಾಗೂ ಮಹೇಶ್ ಅವರೊಂದಿಗೆ ಜೊತೆಗೂಡಿ ಹತ್ಯೆ ಮಾಡಿದ್ದಾಳೆ. ಬಳಿಕ ಇದು ಸಹಜ ಸಾವೆಂದು ಬಿಂಬಿಸಿದ್ದಾಳೆ. ಹೊರಹೋಗಿದ್ದ ತಾಯಿ ಮನೆಗೆ ಬಂದು ನೋಡಿದಾಗ ಮಗ ಮೃತಪಟ್ಟಿದ್ದು ಗೊತ್ತಾಗಿದೆ. ಬಳಿಕ ಅವರು ಕೂಡಲೇ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದ್ದಾರೆ. ಅಕ್ಕಪಕ್ಕದವರು ಬಂದು ನೋಡಿದಾಗ ಸುರೇಶ್ ಮೃತಪಟ್ಟಿದ್ದು ಖಚಿತವಾಗಿದೆ.
ಸುರೇಶ್ ಕುಡಿದು ಬಂದು ಮನೆಯಲ್ಲಿ ದಿನನಿತ್ಯ ಜಗಳ ಮಾಡುತ್ತಿದ್ದನಂತೆ. ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದನಂತೆ. ಹೀಗೆಂದು ಹತ್ಯೆಯಾದ ಸುರೇಶ್ ಅವರ ತಾಯಿ ಹೇಳುತ್ತಾರೆ. ಹಾಗಾಗಿ ತಂಗಿ ಭವ್ಯ ಅಣ್ಣನ ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾಳೆ ಎನ್ನಲಾಗ್ತಿದೆ. ಮೃತದೇಹದ ಕುತ್ತಿಗೆಯಲ್ಲಿ ಗಾಯದ ಗುರುತು ಪತ್ತೆಯಾಗಿದ್ದು, ಕೆಲವರು ಸಾವಿನ ಬಗ್ಗೆ ಅನುಮಾನ ಸಹ ವ್ಯಕ್ತಪಡಿಸಿದ್ದರಂತೆ.
ಇದನ್ನೂ ಓದಿ: ಪಿಎಸ್ಐ ನೇಮಕಾತಿ ಹಗರಣ: ನೀರಾವರಿ ಇಲಾಖೆಯ ಅಧಿಕಾರಿ ಸಿಐಡಿಗೆ ಶರಣಾಗತಿ
ಇದು ಅಸಹಜ ಸಾವು ಎಂದು ಅರಿತ ಸುರೇಶನ ಸ್ನೇಹಿತ ಗಣೇಶ್ ಎಂಬುವರು ಕುಶಾಲನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು, ಮೂರು ದಿನಗಳ ಹಿಂದೆ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಏಪ್ರಿಲ್ 20ರಂದು ಈ ಘಟನೆ ನಡೆದಿದೆ.