ಕೊಡಗು: ಭೂ ಕುಸಿತದಿಂದ ಮಂಜಿನ ನಗರಿ ಅಕ್ಷರಶಃ ನಲುಗಿ ಹೋಗಿದೆ. ಮಹಾಮಳೆಯಿಂದಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿ ಮೃತಪಟ್ಟವರ ಪಟ್ಟಿ ಬೆಳೆಯುತ್ತಲೇ ಇದೆ. ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಸಂಭವಿಸಿದ ಭಯಾನಕ ಭೂಕುಸಿತದಲ್ಲಿ ಪ್ರಾಣ ಸ್ನೇಹಿತನೊಬ್ಬ ತನ್ನ ತಾಯಿ-ತಂಗಿಯನ್ನು ಕಳೆದುಕೊಂಡರೂ ಅಳುಕದೇ ಗೆಳೆಯನ ಜೀವ ಉಳಿಸಿದ್ದಾನೆ.
ಹೌದು, ಜಿಲ್ಲೆಯ ವಿರಾಜಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಆಗಸ್ಟ್ 2 ನೇ ವಾರದಿಂದ ನಿರಂತರವಾಗಿ ಸುರಿದ ಮಳೆಗೆ ಸಡಿಲಗೊಂಡ ಬೃಹತ್ ಬೆಟ್ಟ ಕುಸಿದು ತೋರಾ ಗ್ರಾಮವನ್ನೇ ಆವರಿಸಿತ್ತು. ಈ ವೇಳೆ ನವೀನ್ ಎಂಬುವವರ ತಾಯಿ ಮತ್ತು ತಂಗಿ ಮೇಲೆ ಬೀರು ಬಿದ್ದಿತ್ತು. ಆದರೆ ಕಾಲು ಮಣ್ಣಿನಲ್ಲಿ ಸಿಲುಕಿಕೊಂಡಿದ್ದರಿಂದ ತಾಯಿ-ತಂಗಿಯ ಜೀವ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಕಣ್ಣ ಮುಂದೆಯೇ ಹೆತ್ತ ತಾಯಿ, ಒಡಹುಟ್ಟಿದ ತಂಗಿಯನ್ನು ಕಳೆದುಕೊಂಡ ನವೀನ ಎದೆಗುಂದದೇ, ಇತ್ತ ಮಣ್ಣಿನಡಿ ಸಿಲುಕಿ ನರಳುತಿದ್ದ ಸ್ನೇಹಿತನ ಪ್ರಾಣ ಉಳಿಸಿದ್ದರು.
ಕರಾಳ ನೆನೆಪು :
ರೇಷನ್ ಹಾಗೂ ಆಧಾರ್ ಕಾರ್ಡ್ ತೆಗೆದುಕೊಂಡು ನಿರಾಶ್ರಿತ ಕೇಂದ್ರಕ್ಕೆ ಹೊರಟಿದ್ದೆವು. ಅಷ್ಟೊತ್ತಿಗಾಗಲೇ ಬೆಟ್ಟ ಜರಿದ ಭಯಾನಕ ಸದ್ದು ಕೇಳಿಸಿತು. ಮನೆಯಿಂದ ಹೊರಗೆ ಬರುವಷ್ಟರಲ್ಲಿ ಗುಡ್ಡದ ಮಣ್ಣು ನನ್ನ ಸ್ನೇಹಿತ ನವೀನ್ನ ತಾಯಿ ಮತ್ತು ತಂಗಿ ಮೇಲೆರಗಿತ್ತು. ಅಲ್ಲಿ ಎಲ್ಲವೂ ಸರ್ವನಾಶವಾಗಿತ್ತು. ನನ್ನ ಕಾಲು ಕೆಸರಿನಲ್ಲಿ ಹೂತಿತ್ತು, ಮೇಲೆ ಏಳಲೂ ಆಗದ ಸ್ಥಿತಿಯಲ್ಲಿ ನಾನಿದ್ದೆ. ಕೆಸರು ನೀರನ್ನೇ ಕುಡಿದು ದಾಹ ನೀಗಿಸಿಕೊಂಡೆ. ಆಗ ನನ್ನ ಸ್ನೇಹಿತ ನನ್ನಮ್ಮ ಮತ್ತು ತಂಗಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ. ನಿನ್ನನ್ನಾದರೂ ಉಳಿಸಿಕೊಳ್ಳುವೆ ಅಂತಾ ನನ್ನನ್ನು ರಕ್ಷಿಸಿದ ಎಂದು ಕರಾಳ ನೆನೆಪನ್ನು ಮೆಲಕು ಹಾಕುತ್ತಾರೆ ಸತೀಶ್.