ಕೊಡಗು: ಈಗಾಗಲೇ ಕೊರೊನಾ ಸೋಂಕಿನ ಆತಂಕದಲ್ಲಿರುವ ರಾಜ್ಯಕ್ಕೆ ಹಕ್ಕಿ ಜ್ವರ ಭೀತಿ ಕಾಡುತ್ತಿದೆ. ಮಂಜಿನ ನಗರಿ ಕೊಡಗಿಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಗಡಿ ಭಾಗದಲ್ಲಿ ಪಶು ಪಾಲನಾ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಚೆಕ್‌ಪೋಸ್ಟ್ ಕೇಂದ್ರಗಳನ್ನು ತೆರೆದು ಕೇರಳ ಗಡಿಯಿಂದ ಬರುವ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಈ ಸಂಬಂಧ ಗಡಿ ಭಾಗಗಳಲ್ಲಿ ಅಲರ್ಟ್ ಘೋಷಿಸಿದೆ. ವಿರಾಜಪೇಟೆ ತಾಲೂಕಿನ ಮಾಕುಟ್ಟ, ಪೆರುಂಬಾಡಿ ಮತ್ತು ಮಡಿಕೇರಿಯ ಕರಿಕೆ ಸೇರಿದಂತೆ ವಿವಿಧೆಡೆ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ, ಕೇರಳದಿಂದ ಬರುವ ಕೋಳಿ ಹಾಗೂ ಅದರ ಉತ್ಪನ್ನಗಳು ಪ್ರವೇಶಿಸದಂತೆ ಮುನ್ನೆಚ್ವರಿಕೆ ವಹಿಸಲಾಗಿದೆ.
ಪಶು ವೈದ್ಯಾಧಿಕಾರಿ ಡಾ.ಶಾಂತೇಶ್ ನೇತೃತ್ವದ ತಂಡ ಪೆರುಂಬಾಡಿ ಚೆಕ್‌ಪೋಸ್ಟ್ ಬಳಿ ಕೇರಳದಿಂದ ಬರುತ್ತಿರುವ ಎಲ್ಲ ವಾಹನಗಳಿಗೆ ಕ್ರಿಮಿನಾಶಕ ಸಿಂಪಡಿಸಿ, ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಹಕ್ಕಿಜ್ವರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಕೊರೊನಾ ಆತಂಕದ ನಡುವೆ ಕುಕ್ಕುಟೋದ್ಯಮವನ್ನು ನಂಬಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕಿಜ್ವರ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.