ಕೊಡಗು: ಪಾರ್ಕಿಂಗ್ ಸ್ಥಳಗಳಿಂದ ಬೈಕ್ ಕಳವು ಮಾಡುತ್ತಿದ್ದ ನಾಲ್ವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಜಿಲ್ಲೆಯ ಮೂರ್ನಾಡು, ಮೊಣ್ಣಂಗೇರಿ ಮತ್ತು ಐಕೊಳ ಗ್ರಾಮಗಳ ನಿವಾಸಿಗಳಾದ ಅರುಣ, ಸಚಿನ್, ಕಾರ್ತಿಕ್ ಮತ್ತು ವಾಸು ಬಂಧಿತ ಆರೋಪಿಗಳು. ಜಿಲ್ಲೆಯ ಖಾಸಗಿ ಬಸ್ಗಳಲ್ಲಿ ಕ್ಲೀನರ್ ಆಗಿರುವ ಇವರು ಜಿಲ್ಲೆಯ ವಿವಿಧೆಡೆ ಜನರು ಪಾರ್ಕಿಂಗ್ ಮಾಡಿ ಅತ್ತ ಇತ್ತ ಹೋಗುತ್ತಿದ್ದುದನ್ನೇ ನೋಡಿ ಬೈಕ್‌ಗಳನ್ನು ಎಗರಿಸುತ್ತಿದ್ದರು ಎನ್ನಲಾಗಿದೆ. ಮೊನ್ನೆ ಕೂಡ ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಪಾರ್ಕಿಂಗ್ ಲಾಟ್ನಿಂದ ಬೈಕ್ ಎಗರಿಸುತ್ತಿದ್ದ ವೇಳೆ ಇಬ್ಬರು ಖದೀಮರು ಸಿಕ್ಕಿ ಬಿದ್ದಿದ್ದರು. ಕೂಡಲೇ ಇವರನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ಮತ್ತಿಬ್ಬರು ಇವರ ಗ್ಯಾಂಗ್ನಲ್ಲಿ ಇರುವುದು ಗೊತ್ತಾಗಿದೆ. ಕೂಡಲೇ ಎಚ್ಚೆತ್ತುಕೊಂಡ ಮಡಿಕೇರಿ ನಗರ ಪೊಲೀಸರು ನಾಲ್ವರ ಹೆಡೆಮುರಿ ಕಟ್ಟಿದ್ದಾರೆ.
ಕಳೆದ ಒಂದೂವರೆ ವರ್ಷದಿಂದ ಬೈಕ್ ಕಳ್ಳತನ ಕೆಲಸಕ್ಕೆ ಇಳಿದಿದ್ದ ಇವರು, ಇತ್ತೀಚೆಗೆ ಒಂದು ಪಿಸ್ತೂಲ್ ಅನ್ನು ಕದ್ದಿದ್ದರು. ಪೊಲೀಸರ ವಿಚಾರಣೆ ವೇಳೆ ಇದೆಲ್ಲವೂ ಬಯಲಾಗಿದೆ. ಹೆಸರಿಗಷ್ಟೇ ಬಸ್ ಕ್ಲೀನಿಂಗ್ ಮಾಡುತ್ತಿದ್ದ ಈ ಚೋರರು, ಬೈಕ್ ಜೊತೆಗೆ ಇತರೆ ಚಿಕ್ಕಪುಟ್ಟ ಕಳ್ಳತನದ ಕೆಲಸವನ್ನೇ ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದರು ಎಂದು ಕೊಡಗು ಎಸ್ಪಿ ಸುಮನ್ ಡಿ. ಪನ್ನೇಕರ್ ವಿವರಿಸಿದ್ದಾರೆ.