ಕೊಡಗು: ಸಚಿವರೇ ನಮ್ಮೂರಿನಲ್ಲಿ ಉಳಿದುಕೊಳ್ಳಲು ಬರುತ್ತಿದ್ದಾರೆ. ಇನ್ಮುಂದೆ ನಮ್ಮೂರಿನ ಕಷ್ಟಗಳೆಲ್ಲಾ ದೂರವಾಗಿ ಬಿಡುತ್ತವೆ. ನಮ್ಮೂರಿಗೂ ಎಲ್ಲಾ ಸೌಲಭ್ಯಗಳು ದೊರಕುತ್ತವೆ ಅಂತ ಕನಸು ಕಂಡಿದ್ದ ಜಿಲ್ಲೆಯ ವಿರಾಜಪೇಟೆ ತಾಲೂಕಿನ ದೊಡ್ಡರೇಷ್ಮೆ ಹಾಡಿಯ ಜನರ ನಂಬಿಕೆ ಹುಸಿಯಾಗಿದೆ.
ಕಳೆದ ಐದು ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು, ವಿರಾಜಪೇಟೆ ತಾಲ್ಲೂಕಿನ ದೊಡ್ಡರೇಷ್ಮೆ ಹಾಡಿಗೆ ಗ್ರಾಮ ವ್ಯಾಸ್ತವ್ಯ ಮಾಡಿದ್ದರು. ಅಂದು ಈ ಹಾಡಿಯ ಜನರಿಗೆ ಇನ್ನಿಲ್ಲದಷ್ಟು ಸಂತೋಷವಾಗಿತ್ತು. ಈ ವೇಳೆ ಹಾಡಿಯ ಜನರಿಗೆ ಮನೆ, ಊರಿಗೆ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ನೀಡುವ ಭರವಸೆ ಕೂಡ ನೀಡಿದ್ದರು. ಆದರೆ, ಅದೆಲ್ಲವೂ ಅಂದಿನ ಸಚಿವರ ಮಾತಿನಲ್ಲಿ ಉಳಿದುಬಿಟ್ಟಿದೆ.
ಊರಿಗೆ ಸೌಲಭ್ಯದ ಮಾತಿರಲಿ, ಅಂದು ಸಚಿವ ಆಂಜನೇಯ ವಾಸ್ತವ್ಯ ಹೂಡಿದ್ದ ಗಂಗಮ್ಮನವರ ಗುಡಿಸಲೂ ಕೂಡ ಬದಲಾಗಿಲ್ಲ. ಮನೆ ಮಾಡಿಕೊಡುವುದಾಗಿ ಹೇಳಿ ಐದು ವರ್ಷವಾದರೂ ಇಂದಿಗೂ ಮನೆ ಆಗಿಲ್ಲ. ವಿದ್ಯುತ್ ಸಂಪರ್ಕವೂ ಇಲ್ಲ. ಸಚಿವರು ಬಂದಾಗ ಅಧಿಕಾರಿಗಳು ಎರಡು ಲ್ಯಾಂಪ್ ಲೈಟ್ಗಳನ್ನು ತಂದಿದ್ದರು. ಸಚಿವರು ಹೋಗುವಾಗ ಅವುಗಳನ್ನು ತೆಗೆದುಕೊಂಡು ಹೋದರು ಎನ್ನುತ್ತಾರೆ ಗಂಗಮ್ಮ.
ಹಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ದೊಡ್ಡದೊಂದು ಹಳ್ಳವಿದ್ದು, ಮಳೆಗಾಲದಲ್ಲಿ ತುಂಬಿಹರಿಯುತ್ತದೆ. ಅಂದು ಸಚಿವ ಆಂಜನೇಯ ಹಾಡಿಯಲ್ಲಿ ವಾಸ್ತವ್ಯ ಮಾಡಲು ಬಂದಾಗ ಈ ಹಳ್ಳಕ್ಕೆ ಮಣ್ಣು ಮುಚ್ಚಿ, ರಸ್ತೆ ನಿರ್ಮಿಸಲಾಗಿತ್ತು. ಆದರೆ, ಮಳೆ ಬರುತ್ತಿದ್ದಂತೆ ಅದೆಲ್ಲವೂ ಕೊಚ್ಚಿಹೋಯಿತು. ಎರಡು ವರ್ಷಗಳ ಹಿಂದೆ ಜಿಲ್ಲಾಧಿಕಾರಿ ಇಲ್ಲಿಗೆ ಬಂದಾಗ ಸೇತುವೆ ನಿರ್ಮಿಸಿಕೊಡುವುದಾಗಿ ಐಟಿಡಿಪಿ ಅಧಿಕಾರಿಗಳಿಗೆ ಸೂಚಿಸಿದ್ದರು. ಇಂದಿಗೂ ಸೇತುವೆಯಾಗಿಲ್ಲ. ಹಾಡಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಪುಟಾಣಿ ಮಕ್ಕಳು ಶಾಲೆಗೆ ಹೋಗಬೇಕಾದರೆ ಮರದ ದಿಮ್ಮಿಯನ್ನು ಹತ್ತಿ, ಒಬ್ಬರ ಕೈಯನ್ನು ಮತ್ತೊಬ್ಬರು ಹಿಡಿದು ದಾಟಬೇಕು.
ರೇಷ್ಮೆ ಹಾಡಿಯಲ್ಲಿ 170 ಕುಟುಂಬಗಳಿದ್ದರೂ ಇಂದಿಗೂ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 18 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿಗಾಗಿ ಬೋರ್ ಕನೆಕ್ಷನ್, ಟ್ಯಾಂಕ್ ನಿರ್ಮಿಸಿದ್ದರೂ ಉಪಯೋಗಕ್ಕೆ ಬಾರದೆ ಹಾಗೇ ಬಿದ್ದಿವೆ ಎನ್ನೋದು ಜನರ ಆರೋಪ. ಒಟ್ಟಿನಲ್ಲಿ ಸರ್ಕಾರವೇ ನಿಮ್ಮೂರಿಗೆ ಬಂದಿದೆ ಎಂದಿದ್ದ ಮಾಜಿ ಸಚಿವ ಆಂಜನೇಯ, ಹಾಡಿಗೆ ಬಂದು ಹೋಗಿ ಐದು ವರ್ಷಗಳೇ ಕಳೆದರೂ ಇಲ್ಲಿನ ಜನರ ಬವಣೆ ಮಾತ್ರ ತಪ್ಪಿಲ್ಲ. ಇಂತಹ ಗ್ರಾಮ ವಾಸ್ತವ್ಯಗಳನ್ನು ತೋರಿಕೆಗಾಗಿ ಯಾಕೆ ಮಾಡಬೇಕು ಅನ್ನೋದು ಜನರ ಪ್ರಶ್ನೆ.