ಕೊಡಗು: ಸಾಕಪ್ಪ..ಸಾಕು ಎನ್ನುವಷ್ಟು ಅವಾಂತರ ಸೃಷ್ಟಿಸಿ ಮರೆಯಾಗಿದ್ದ ಮಳೆರಾಯ, ಜಿಲ್ಲೆಯಲ್ಲಿ ಮತ್ತೆ ಕಾಣಿಸಿಕೊಂಡಿದ್ದಾನೆ. ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಮಧ್ಯಾಹ್ನ ತುಸು ಬಿಡುವು ಕೊಟ್ಟಿದ್ದರೂ ಮತ್ತೆ ಯಾವಾಗ ಅಬ್ಬರಿಸಿ ನೆಮ್ಮದಿಯನ್ನು ಕಸಿಯುತ್ತದೋ ಎಂಬ ಭೀತಿಯಲ್ಲೇ ಇದ್ದಾರೆ ಜನ..!!
ಕೊಡಗು ಜಿಲ್ಲೆಯಲ್ಲಿ ಮಳೆ ಶುರುವಾದ್ರೆ ಸಾಕು ಸ್ಥಳೀಯರಿಗೆ ಆತಂಕ ಮೂಡುತ್ತಿದೆ. ಮೂರು ದಿನಗಳಿಂದ ಸುರಿದ ಮಳೆಗೆ ಕಾವೇರಿ ಕೊಳ್ಳದಲ್ಲಿ ನೀರಿನ ಮಟ್ಟ ಏರಿದೆ. ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿರುವ ಪರಿಣಾಮ ಭಾಗಮಂಡಲ - ತಲಕಾವೇರಿ ಸಂಪರ್ಕ ಕಲ್ಪಿಸುವ ರಸ್ತೆ ಜಲಾವೃತವಾಗಿದೆ. ಭಗಂಡೇಶ್ವರ ದೇವಸ್ಥಾನಕ್ಕೆ ಆಗಮಿಸುತ್ತಿರುವ ಭಕ್ತರು, ನೀರಿನಲ್ಲಿ ಕಟ್ಟಿದ ಹಗ್ಗವನ್ನೇ ಆಶ್ರಯಿಸಿದ್ದಾರೆ.
ಮಳೆ ಕಡಿಮೆ ಆಯ್ತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದೆವು. ಇದೀಗ ಮತ್ತೆ ಮಳೆ ಶುರುವಾಗಿ ಆತಂಕ ಸೃಷ್ಟಿಸಿದೆ. ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ ಮೇಲೆಲ್ಲ ಬರೆ ಮಣ್ಣು ಜರಿಯುತ್ತಿದೆ. ವಿರಾಜಪೇಟೆ ತಾಲೂಕಿನ ತೋರಾ ಗ್ರಾಮದಲ್ಲಿ ಭೂ ಕುಸಿತದಿಂದ ಕಣ್ಮರೆಯಾದ ನಾಲ್ಕು ಮಂದಿ ಇನ್ನೂ ಪತ್ತೆ ಆಗಲಿಲ್ಲ. ಜೊಡುಪಾಲದಲ್ಲಿ ಕಳೆದ ಬಾರಿ ಭೂಕುಸಿತವಾದ ಪ್ರದೇಶದ ಆಸು-ಪಾಸಿನಲ್ಲಿ ಬಿರುಕು ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ನಿವಾಸಿ ಇಬ್ರಾಹಿಂ.