ಕೊಡಗು: ಭೂ ಕುಸಿತಕ್ಕೆ ಸಿಲುಕಿದ್ದವರ ಹುಡುಕಾಟದಲ್ಲಿ ನಿರತವಾಗಿದ್ದ ಜೆಸಿಬಿ ಡೀಸೆಲ್ ಖಾಲಿಯಾದ ಹಿನ್ನೆಲೆ ಡೀಸೆಲ್ ತೆಗೆದುಕೊಂಡು ಕೊಟ್ಟು ವಾಪಸ್ ಮರಳುತ್ತಿದ್ದ ವೇಳೆ ಶಾಸಕ ಬೋಪಯ್ಯ ಹಾಗೂ ಬೆಂಬಲಿಗರ ಜೀಪ್ ಕೆಸರಿನಲ್ಲಿ ಸಿಲುಕಿದ್ದ ಘಟನೆ ವಿರಾಜಪೇಟೆ ತಾಲೂಕಿನ ತೋರಾ ಬಳಿ ನಡೆದಿದೆ.
ವಾರದಿಂದ ಧಾರಾಕಾರವಾಗಿ ಸುರಿದಿದ್ದ ಮಳೆ ಪರಿಣಾಮ ತೋರಾ ಗ್ರಾಮದ ಮೇಲೆ ಬೃಹತ್ ಗುಡ್ಡವೇ ಕುಸಿದಿತ್ತು. ಹಲವರು ಮಣ್ಣಿನಡಿ ಸಿಲುಕಿರುವ ಸಾಧ್ಯತೆ ಹಿನ್ನೆಲೆ ಇಂದಿನಿಂದ ಜೆಸಿಬಿ ಯಂತ್ರಗಳ ಮೂಲಕ ಶೋಧ ಕಾರ್ಯ ಪ್ರಾರಂಭಿಸಿದ್ದರು. ಕೆಲಸ ಮಾಡುತ್ತಿದ್ದ ವೇಳೆ ಜೆಸಿಬಿ ಯಂತ್ರಗಳ ಡಿಸೇಲ್ ಖಾಲಿಯಾಗಿದೆ. ನಂತರ ಸ್ವತಃ ಶಾಸಕ ಬೋಪಯ್ಯ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಬೆಂಬಲಿಗರು ಜೀಪ್‌ನಲ್ಲಿ ಡೀಸೆಲ್ ತೆಗೆದುಕೊಂಡು ಹೋಗಿ ಕೊಟ್ಟು ವಾಪಸ್ ತೆರಳುವಾಗ ದುರ್ಗಮ ರಸ್ತೆಯಲ್ಲಿ ಜೀಪ್ ಕೆಸರಿನಲ್ಲಿ ಸಿಲುಕಿದೆ.
ಕೆಸರಿನಲ್ಲಿ ಸಿಲುಕಿಕೊಂಡಿದ್ದರಿಂದ ಮೇಲೆ ಬಾರದೆ ರಾತ್ರಿ 8.45ರವರೆಗೆ ಪರದಾಡಿದ್ದಾರೆ. ಜೀಪ್ ಮೇಲೆತ್ತಲು ವ್ಯರ್ಥ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ನೆಟ್ವರ್ಕ್ ಇಲ್ಲದೆ ಕೆಲಕಾಲ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ಜೀಪ್ ಮೆಲೇತ್ತುವ ಕಾರ್ಯ ನಡೆಯುತ್ತಿದೆ.