ಮಡಿಕೇರಿ: ಅಯೋಧ್ಯೆಯಲ್ಲಿ ನಾಳೆ ರಾಮ ಮಂದಿರ ಶಿಲಾನ್ಯಾಸ ನೆರವೇರಲಿರುವ ಹಿನ್ನೆಲೆ ಸರ್ಕಾರ ಮಾರ್ಗಸೂಚಿ ಅನ್ವಯ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಮಾಡಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಆದೇಶ ಹೊರಡಿಸಿದ್ದಾರೆ.
ಸರ್ಕಾರಿ ಕಾರ್ಯಕ್ರಮ ಮತ್ತು ಪೂರ್ವ ಯೋಜಿತ ನಿಶ್ಚಿತಾರ್ಥ, ಮದುವೆ, ನಾಮಕರಣ, ಗೃಹ ಪ್ರವೇಶ ಮುಂತಾದ ಸಮಾರಂಭಗಳು ಮತ್ತು ಪೂಜಾ ಮಂದಿರ, ಮಸೀದಿಗಳಲ್ಲಿ ನಡೆಯುವ ಪ್ರತಿನಿತ್ಯದ ಪ್ರಾರ್ಥನೆ ಹೊರತುಪಡಿಸಿ, ಸಭೆ ಸಮಾರಂಭ ಮತ್ತು ಮೆರವಣಿಗೆಯನ್ನು ನಿಷೇಧಿಸಿದೆ. ಎಲ್ಲಾ ಸಾರ್ವಜನಿಕ, ರಾಜಕೀಯ ಬಹಿರಂಗ ಸಭೆ-ಸಮಾರಂಭ, ಪ್ರಚೋದನಾಕಾರಿ ಹೇಳಿಕೆ, ಘೋಷಣೆ, ಕಪ್ಪು ಬಾವುಟ, ಪಟ್ಟಿ ಪ್ರದರ್ಶನ, ಭಾಷಣ, ಮೆರವಣಿಗೆ, ಪ್ರತಿಭಟನೆ, ಜಾಥಾ, ಧರಣಿ, ಮುಷ್ಕರ, ರಸ್ತಾ-ರೋಕಾ, ಮುತ್ತಿಗೆ, ಪಟಾಕಿ ಸಿಡಿಸುವಂತಿಲ್ಲ ಎಂದು ಸೂಚಿಸಲಾಗಿದೆ.
ಕೋಮು ಭಾವನೆಗಳಿಗೆ ಧಕ್ಕೆಯಾಗುವಂತಹ ವಿಜಯೋತ್ಸವ ಮತ್ತು ಕರಾಳ ದಿನ ಆಚರಿಸುವಂತಿಲ್ಲ. ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಕರ ಪತ್ರ, ಭಿತ್ತಿಪತ್ರ ಬಳಸುವುದು, ಅಂಟಿಸುವುದು ಅಥವಾ ಹಂಚುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ಯಾವುದೇ ರೀತಿಯ ಮತೀಯ ಪ್ರಚೋದನಾತ್ಮಕ ಧ್ವಜ, ಫಲಕ, ಬಾವುಟಗಳ ಪ್ರದರ್ಶನ ಮತ್ತು ಬಳಕೆಯನ್ನು ಮಾಡುವಂತಿಲ್ಲ. ನಿಷೇಧಿತ ಅವಧಿಯಲ್ಲಿ ಜನರು ಗುಂಪು ಸೇರುವಂತಿಲ್ಲ. ಸರ್ಕಾರಿ ಕರ್ತವ್ಯದ ನಿಮಿತ್ತ ಮತ್ತು ಬ್ಯಾಂಕ್, ಎಟಿಎಂ ಭದ್ರತಾ ಕಾರ್ಯಕ್ಕಾಗಿ ನಿಯೋಜಿಸಲ್ಪಟ್ಟ ಸಿಬ್ಬಂದಿಗಳನ್ನು ಹೊರತುಪಡಿಸಿ, ವ್ಯಕ್ತಿಗಳು ಯಾವುದೇ ರೀತಿಯ ಆಯುಧ ಹೊಂದಿರುವುದು, ಪ್ರದರ್ಶಿಸುವುದು ಅಥವಾ ಹಿಡಿದುಕೊಂಡು ತಿರುಗಾಡುವುದನ್ನು ನಿಷೇಧಿಸಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.