ಕಲಬುರಗಿ: ರಸ್ತೆಯಲ್ಲಿ ಹೊಗೆ ಆವರಿಸಿದ ಪರಿಣಾಮ ಪರಸ್ಪರ ವಾಹನಗಳು ಕಾಣದೆ ಸಾರಿಗೆ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ಓರ್ವ ಯುವಕ ಮೃತಪಟ್ಟು, ಮತ್ತೋರ್ವನಿಗೆ ಗಂಭೀರ ಗಾಯಗಳಾಗಿರುವ ಘಟನೆ ಆಳಂದ-ನಿರಗುಡಿ ರಸ್ತೆಯಲ್ಲಿ ನಡೆದಿದೆ.
ನಿರಗುಡಿ ಗ್ರಾಮದ ಖಾದಿರ್ ತಾಜೋದ್ದಿನ್ ತಾಜ್ವಾಲೆ (24) ಮೃತ ದುರ್ದೈವಿ. ಬೈಕ್ ಹಿಂಬದಿ ಸವಾರ 13 ವರ್ಷದ ಶಿವಾಜಿ ಪಾಟೀಲ್ ಎಂಬಾತನಿಗೆ ಗಂಭೀರವಾಗಿ ಗಾಯಗಳಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿರಗುಡಿ ಗ್ರಾಮ ಬಳಿಯ ರಸ್ತೆಗೆ ಅಂಟಿಕೊಂಡಿರುವ ಹೊಲವೊಂದರಲ್ಲಿ ರೈತ ತೊಗರಿ ಕಟಾವು ನಂತರ ಬೆಂಕಿ ಹಚ್ಚಿದ್ದು, ರಸ್ತೆಯಲ್ಲಿ ದಟ್ಟವಾದ ಹೊಗೆ ಆವರಿಸಿದ ಪರಿಣಾಮ ಪರಸ್ಪರ ವಾಹನಗಳು ಕಾಣದೆ ಮುಖಾಮುಖಿ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ ಎನ್ನಲಾಗಿದೆ. ಆಳಂದ ಪಿಎಸ್ಐ ಮಹಾಂತೇಶ ಪಾಟೀಲ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.