ಕಲಬುರಗಿ : ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಯಾರು ಏನೇ ಹೇಳಲಿ, ಮುಂದಿನ ಮೂರೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿ ಮುಂದುವರೀತಾರೆ ಎಂದು ಮಾಜಿ ಸಚಿವ ಹಾಗೂ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ವ್ಯತ್ಯಾಸಗಳು ಇರುವುದು ಸಾಮಾನ್ಯ. ಇದೆಲ್ಲ ಒಂದು ರೀತಿಯ ಅಣ್ಣ-ತಮ್ಮಂದಿರ ನಡುವಿನ ಭಿನ್ನಾಭಿಪ್ರಾಯವಿದ್ದಂತೆ, ಎಲ್ಲ ಸರಿಪಡಿಸಿಕೊಳ್ಳಬೇಕು. ಪಕ್ಷದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಕೆಲ ಭಿನ್ನಾಭಿಪ್ರಾಯಗಳಿದ್ದರೂ ಅದು ಸಾಮಾನ್ಯ. ಯಡಿಯೂರಪ್ಪ ಅವರ ನಾಯಕತ್ವ ನಮಗೆ ದೊಡ್ಡ ಆಸ್ತಿ ಇದ್ದಂತೆ. ಅವರೇ ಸಿಎಂ ಆಗಿ ಮುಂದುವರೀತಾರೆ. ಕುಮಠಳ್ಳಿ, ರಮೇಶ್ ಜಾರಕಿಹೊಳಿ, ಬೇರೆಯವರು ಏನೇ ಹೇಳಲಿ. ಜಾರಕಿಹೊಳಿಯೂ ನಮ್ಮ ಸಹೋದರನಿದ್ದಂತೆ. ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡೋ ಕೆಲಸ ಮಾಡೋದಿಲ್ಲ ಎಂಬ ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ಮಾತನಾಡಿದ ಅವರು, ವಿಕಾಸಸೌಧದಲ್ಲಿ ಪ್ರತ್ಯೇಕ ಕಚೇರಿ ಬೇಡಿಕೆ ಇಟ್ಟಿಲ್ಲ. ಮಕ್ಕಳಿಲ್ಲದ ತನಗೆ ಸಮಾಜದ ಜವಾಬ್ದಾರಿ ವಹಿಸೋ ಉದ್ದೇಶದಿಂದ ಸಿಎಂ ಯಡಿಯೂರಪ್ಪ ಅವರು ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷನನ್ನಾಗಿ ಮಾಡಿದ್ದಾರೆ.
ಅವಧಿ ಇರೋವರೆಗೂ ಕೋಲಿ- ಕಬ್ಬಲಿಗ ಸಮಾಜದ ಕಲ್ಯಾಣಕ್ಕೆ ಶ್ರಮಿಸುತ್ತೇನೆಯೇ ಹೊರತು, ಪ್ರತ್ಯೇಕ ಕಚೇರಿಯ ಬೇಡಿಕೆ ಇಡೋದಿಲ್ಲ ಎಂದು ಸ್ಪಷ್ಟನೆ ನೀಡಿದರು.