ಕುಷ್ಟಗಿ (ಕೊಪ್ಪಳ): ಗ್ರಾಮ ಪಂಚಾಯತ್ ಚುನಾವಣೆ ಮುಂದೂಡುವುದು ಅನಿವಾರ್ಯವಾದಲ್ಲಿ ಆಡಳಿತಾಧಿಕಾರಿಗಳನ್ನ ನೇಮಕ ಮಾಡುವ ಬದಲು ಈಗಿರುವ ಚುನಾಯಿತ ಸದಸ್ಯರ ಅವಧಿಯನ್ನ 6 ತಿಂಗಳವರೆಗೆ ವಿಸ್ತರಿಸುವಂತೆ ಕುಷ್ಟಗಿ ತಹಶೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗಳಿಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ (ಡಬ್ಲ್ಯೂಪಿಐ) ಸದಸ್ಯರು ಮನವಿ ಸಲ್ಲಿಸಿದರು.
ಈಗಾಗಲೇ ಕೋವಿಡ್-19 ನಿರ್ವಹಣೆ ದೃಷ್ಟಿಯಿಂದ ಗ್ರಾಮ ಪಂಚಾಯಿತಿಗಳಿಗೆ ಸಾಕಷ್ಟು ಹೊಣೆಗಾರಿಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯತ್ಗಳ ಸಾರ್ವತ್ರಿಕ ಚುನಾವಣೆಗಳನ್ನು ಕನಿಷ್ಠ 6 ತಿಂಗಳ ಕಾಲ ಮುಂದೂಡಬೇಕು ಎಂಬ ರಾಜ್ಯ ಸರ್ಕಾರದ ಪ್ರಸ್ತಾವನೆಗೆ ಚುನಾವಣಾ ಆಯೋಗ ಮಾನ್ಯತೆ ಕೊಡಬಾರದು. ಒಂದೊಮ್ಮೆ ಚುನಾವಣೆ ಮುಂದೂಡುವುದು ಅನಿವಾರ್ಯವಾದಲ್ಲಿ ಆಡಳಿತ ಸಮಿತಿ ಸದಸ್ಯರು ಅಥವಾ ಆಡಳಿತಾಧಿಕಾರಿಗಳನ್ನ ನೇಮಕ ಮಾಡುವ ಬದಲು ಈಗಿರುವ ಚುನಾಯಿತ ಸದಸ್ಯರ ಅವಧಿಯನ್ನ 6 ತಿಂಗಳವರೆಗೆ ವಿಸ್ತರಿಸಬೇಕು.
ಈ ವಿಚಾರದಲ್ಲಿ ಚುನಾವಣಾ ಆಯೋಗ ತನಗೆ ದತ್ತವಾಗಿರುವ ಸಂವಿಧಾನಬದ್ಧ ಹಾಗೂ ಶಾಸನಬದ್ಧ ಅಧಿಕಾರವನ್ನು ಚಲಾಯಿಸಬೇಕು. ಜೊತೆಗೆ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸಲು ಸಾಧ್ಯವಾಗುವ ಎಲ್ಲಾ ಅವಕಾಶಗಳ ಬಗ್ಗೆ ರಾಜ್ಯ ಸರ್ಕಾರ ಪ್ರಾಮಾಣಿಕ ಪರಿಶೀಲನೆ ನಡೆಸಬೇಕು. ಚುನಾವಣೆ ಮುಂದೂಡಿ, ಆಡಳಿತ ಸಮಿತಿ ನೇಮಕ ಮಾಡುವ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.