ಕಲಬುರಗಿ: ನಮಗೆ ಯಾರು ಏನು ಹೇಳುವ ಜರುರತ್ ಇಲ್ಲ. ಎಲ್ಲರೂ ಮನ್ಯಾಗ ಕುಂದುರ್ರ ಅಂತ ಹೇಳ್ತೀರಿ. ನಮಗ ತಂದು ಕೊಡೋರು ಯಾರು? ನಮಗ ಒಳಗ ಹೋಗು ಅಂತ ಧಮ್ಕಿ ಹಾಕಬ್ಯಾಡ್ರಿ. ಸತ್ತರ ನಾವು ಸಾಯ್ತಿವಿ, ನಿಮ್ಗೇನು? ಎಂದು ಮನೆಯ ಹೊರಗೆ ಕುಳಿತ ಮಹಿಳೆಯರಿಗೆ ಕೊರೊನಾ ಬಗ್ಗೆ ತಿಳಿಹೇಳಲು ಹೋದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಮಹಿಳೆಯರು ತರಾಟೆ ತೆಗೆದುಕೊಂಡಿದ್ದಾರೆ.
ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೂ ಜನ ಮಾತ್ರ ಲಾಕ್ಡೌನ್ಗೆ ಕ್ಯಾರೇ ಅನ್ನುತ್ತಿಲ್ಲ. ಸೀಲ್ ಡೌನ್ಗೂ ಡೋಂಟ್ ಕೇರ್ ಎನ್ನುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಮನೆಯ ಹೊರಗೆ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಮಹಿಳೆಯರಿಗೆ ತಿಳಿಹೇಳಲು ಯತ್ನಿಸಿದ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೇ ಮನಬಂದಂತೆ ಬೈದು ಕಳುಹಿಸಿರುವ ಘಟನೆ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ವಾಡಿ ಪಟ್ಟಣದಲ್ಲಿ ಎರಡು ವರ್ಷದ ಮಗುವಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಪಿಲಕಮ್ಮ ಪ್ರದೇಶ ಸೇರಿ ಪಟ್ಟಣದ ನಾಲ್ಕು ವಾರ್ಡ್ಗಳನ್ನು ಸೀಲ್ ಡೌನ್ ಮಾಡಲಾಗಿದೆ. ಸೋಂಕು ಹರಡದಿರುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಇಷ್ಟಾದರೂ ಮಹಿಳೆಯರು ಮಾತ್ರ ಕನಿಷ್ಠ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಮನೆಗಳ ಮುಂದೆ ಕುಳಿತು ಹರಟೆ ಹೊಡೆಯುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿವೆ. ಕೊರೊನಾ ಬಗ್ಗೆ ತಿಳಿಹೇಳಿ ಒಳಗೆ ಹೋಗಿ ಎಂದು ಸಲಹೆ ನೀಡಿದ ಆರೋಗ್ಯ ಇಲಾಖೆ ಸಿಬ್ಬಂದಿಗೆ ಆವಾಜ್ ಹಾಕಿದ್ದಾರೆ. ಮಹಿಳೆಯರ ಈ ವರ್ತನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.