ಕಲಬುರಗಿ: ಕಳೆದ ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ದೇವಸ್ಥಾನದ ಬಾವಿಯಲ್ಲಿ ಪತ್ತೆಯಾಗಿದೆ. 20 ವರ್ಷದ ಯುವತಿ ಮೃತಪಟ್ಟವಳು ಎಂದು ಗುರುತಿಸಲಾಗಿದೆ.
ಯುವತಿ ಡಿ.18ರಂದು ಮನೆಯಿಂದ ನಾಪತ್ತೆಯಾಗಿದ್ದರು. ಮೃತದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಹೀಗಾಗಿ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಕುಟುಂಬಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಇಬ್ಬರು ಯುವಕರು ಹಾಗೂ ಓರ್ವ ಮಹಿಳೆಯ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಮಾಣಿಕೇಶ್ವರಿ ಕಾಲೊನಿಯ ಈಶ್ವರ ಉದ್ಯಾನವನದ ದೇವಸ್ಥಾನದಲ್ಲಿ ಯುವತಿ ಪ್ರತಿನಿತ್ಯ ಬೆಳಿಗ್ಗೆ ಕಸಗುಡಿಸಿ ರಂಗೋಲಿ ಹಾಕಿ ಸೇವೆ ಮಾಡುತ್ತಿದ್ದರು. ಇದೀಗ ಅದೇ ದೇವಸ್ಥಾನದ ಬಾವಿಯಲ್ಲಿ ಶವವಾಗಿ ಪತ್ತೆಯಾಗಿರೋದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಯುವತಿ ಕೋಲಿ ಸಮಾಜಕ್ಕೆ ಸೇರಿದವರು. ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವವರೆಗೂ ಶವ ಸ್ಥಳಾಂತರಿಸಲು ಬಿಡುವುದಿಲ್ಲ ಎಂದು ಸಮಾಜದ ಮುಖಂಡರು ಪಟ್ಟು ಹಿಡಿದಿದ್ದಾರೆ. ಯುವತಿ ನಾಪತ್ತೆ ಪ್ರಕರಣ ದಾಖಲಿಸಲು ಮೂರು ದಿನಗಳಿಂದ ಪೊಲೀಸ್ ಠಾಣೆಗೆ ಹೋದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಯುವತಿಯ ಸಾವಿಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಕಮಿಷನರ್ ಚೇತನ್ ಆರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದ ಜೋಡಿ ಆಟೋ ಡ್ರೈವರ್ ಮನೆಯಲ್ಲಿ ಆತ್ಮಹತ್ಯೆ