ಕಲಬುರಗಿ: 4 ವರ್ಷದ ಹೆಣ್ಣು ಮಗುವಿನೊಂದಿಗೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಜ್‌ಸುಲ್ತಾನಪುರ ಗ್ರಾಮದಲ್ಲಿ ನಡೆದಿದೆ. ತಾಜ್ ಸುಲ್ತಾನಪುರ ಗ್ರಾಮದ ಹಿರಾಬಾಯಿ ದುಬಲಗುಂಡ್ಡಿ (38) ಹಾಗೂ ಇವರ ಪುತ್ರಿ ಸೌಜನ್ಯ ದುಬಾಲಗುಂಡ್ಡಿ (4) ಮೃತರು ಎಂದು ಪೊಲೀಸರು ತಿಳಿಸಿದ್ದಾರೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಕೌಟುಂಬಿಕ ಕಲಹಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸೋಮವಾರ ಬೆಳಗ್ಗೆ ಮನೆಯಿಂದ ಮಗುವಿನೊಂದಿಗೆ ನಾಪತ್ತೆಯಾಗಿದ್ದ ಮಹಿಳೆ ಗ್ರಾಮದ ಹೊರವಲಯದ ಜಮೀನಲ್ಲಿರುವ ತೆರೆದ ಬಾವಿಯಲ್ಲಿ ಇಬ್ಬರು ಶವವಾಗಿ ಪತ್ತೆಯಾಗಿದ್ದಾರೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಶವ ಹೊರ ತೆಗೆದಿದ್ದಾರೆ. ಶವ ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಜಿಲ್ಲೆಯ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂವರು ಮಕ್ಕಳೊಂದಿಗೆ ಮಹಿಳೆ ನಾಪತ್ತೆ: ಇನ್ನೊಂದೆಡೆ ಇಬ್ಬರು ಗಂಡು ಹಾಗೂ ಹೆಣ್ಣು ಮಗುವಿನೊಂದಿಗೆ ಮಹಿಳೆ ನಾಪತ್ತೆಯಾಗಿರುವ ಪ್ರಕರಣ ನಗರದಲ್ಲಿ ವರದಿ ಆಗಿದೆ. ನಗರದ ಭರತನಗರ ತಾಂಡಾದಲ್ಲಿ ಈ ಘಟನೆ ನಡೆದಿದೆ. ಮಹಿಳೆಯ ಪತಿ ಗೌಂಡಿಯಾಗಿದ್ದು, ಕೆಲಸದ ವೇಳೆ ಮೇಲಿಂದ ಬಿದ್ದು ಮೂರು ವರ್ಷಗಳ ಹಿಂದೆ ಮೃತಪಟ್ಟಿದ್ದಾನೆ.
ಗಂಡನ ಸಾವಿನ ನಂತರ ಮಹಿಳೆ ತನ್ನ ಪತಿಯ ಅಣ್ಣನ ಮನೆಯಲ್ಲಿ ವಾಸವಿದ್ದಳು. ಆದರೆ, ಏಕಾಏಕಿ ಮಹಿಳೆ ತನ್ನ ಮಕ್ಕಳೊಂದಿಗೆ ಕಾಣೆಯಾಗಿದ್ದಾಳೆ. ಅಂಗಡಿಗೆ ಹೋಗಿ ಹಾಲು ತರುವುದಾಗಿ ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾಣೆಯಾದವರ ಶೋಧಕಾರ್ಯ ನಡೆಸಿದ್ದಾರೆ.
ನಿಧಾನವಾಗಿ ಹೋಗು ಎಂದಿದ್ದಕ್ಕೆ ವ್ಯಕ್ತಿಗೆ ಹಿಗ್ಗಾಮುಗ್ಗಾ ಥಳಿತ: ಅತೀ ವೇಗವಾಗಿ ಹೋಗುತ್ತಿದ್ದ ಕಾರು ಚಾಲಕನಿಗೆ “ನಿಧಾನವಾಗಿ ಹೋಗು” ಎಂದು ಹೇಳಿದ್ದಕ್ಕೆ ವ್ಯಕ್ತಿಯೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ನಗರದಲ್ಲಿ ನಡೆದಿದೆ. ಬಿದ್ದಾಪುರ ಕಾಲೋನಿಯ ಪಾಂಡುರಂಗ ಜಾಧವ್ರ ಮಗನ ಶಾಲೆಯಲ್ಲಿ ಪಾಸ್‍ಪೋರ್ಟ್ ಸೈಜ್ ಫೋಟೋ ಕೇಳಿದ್ದಾರೆ. ಅದಕ್ಕಾಗಿ ಪಾಂಡುರಂಗ ಅವರು ತಮ್ಮ ಅಳಿಯ ವಸಂತ ರಾಠೋಡ್ ಜೊತೆ ತಮ್ಮ ಏಳು ವರ್ಷದ ಮಗನನ್ನು ಕರೆದುಕೊಂಡು ಹೋಗಿ ಫೋಟೋ ತೆಗೆದುಕೊಂಡು ಬರಲು ಹೇಳಿದ್ದಾರೆ.
ವಸಂತ ಬಾಲಕನನ್ನು ಕರೆದುಕೊಂಡು ಫೋಟೋ ಅಂಗಡಿಗೆ ಎಂದು ಬಿದ್ದಾಪುರ ಕಾಲೋನಿ ಕಡೆಗೆ ಹೋಗುತ್ತಿದ್ದಾಗ, ಅತೀ ವೇಗದಿಂದ ಹೋಗುತ್ತಿದ್ದ ಕಾರು ಚಾಲಕನನ್ನು “ಸ್ಲೋ ಬಾ ಅಣ್ಣಾ” ಅಂದಿದ್ದಾರೆ. ಇಷ್ಟಕ್ಕೆ ಕಾರು ಚಾಲಕ ವಸಂತನನ್ನು ಹಿಂಬಾಲಿಸಿ ಬೈಕ್‍ಗೆ ಅಡ್ಡಗಟ್ಟಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಅಲ್ಲದೇ ಆತನ ಕಡೆ ಇದ್ದ ಇನ್ನೂ ಮೂರು ಜನ ಕೂಡಾ ಮನ ಬಂದಂತೆ ಥಳಿಸಿ ಪಕ್ಕದಲ್ಲಿ ಬಿದ್ದಿದ್ದ ಫರ್ಸಿ ಕಲ್ಲನ್ನು ಮೈಮೇಲೆ ಎತ್ತಿ ಹಾಕಲು ಯತ್ನಿಸಿದ್ದಾರೆ. ಅಷ್ಟರಲ್ಲಿ ಜನ ಸೇರಿದ್ದರಿಂದ ಬಿಟ್ಟು ಹೋಗಿದ್ದಾರೆ. ಈ ಕುರಿತು ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.
ಇದನ್ನೂ ಓದಿ: 9 ವರ್ಷಗಳ ಹಿಂದೆ ಮದುವೆ, 7 ವರ್ಷದ ಮಗ.. ಚಾಕುವಿನಿಂದ ಪತ್ನಿ ಕತ್ತು ಕೂಯ್ದು ಪತಿ ಪರಾರಿ