ಕಲಬುರಗಿ: ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಪತಿಯೇ ಪತ್ನಿಯ ಬರ್ಬರ ಹತ್ಯೆಗೈದ ಘಟನೆ ಬ್ರಹ್ಮಪೂರ ಶಾ-ಹುಸೇನ್ ಚಿಲ್ಲಾ ದರ್ಗಾ ಬಳಿ ನಡೆದಿದೆ.
ಚಂದಾಬಾಯಿ (27) ಎಂಬುವಳೇ ಪತಿಯಿಂದ ಹತ್ಯೆಗೀಡಾದ ಪತ್ನಿ. ಈಕೆಯ ಪತಿ ಜಗದೀಶ್ ಹತ್ಯೆಗೈದ ಆರೋಪಿ ಎಂದು ತಿಳಿದುಬಂದಿದೆ. ಮೂರು ವರ್ಷಗಳ ಹಿಂದೆ ಚಂದಾಬಾಯಿ ಮತ್ತು ಜಗದೀಶ ಮದುವೆಯಾಗಿದ್ದು, ಶಾ ಹುಸೇನ್ ಚಿಲ್ಲಾ ದರ್ಗಾ ಬಳಿ ರೂಂ ಬಾಡಿಗೆ ಪಡೆದು ವಾಸವಾಗಿದ್ದರು. ಕುಡಿತದ ಚಟವಿದ್ದ ಜಗದೀಶ್ ನಿತ್ಯ ಮದ್ಯದ ಮತ್ತಿನಲ್ಲಿ ಪತ್ನಿಗೆ ಕಿರುಕುಳ ನೀಡುತ್ತಿದ್ದನಂತೆ.
ನಿನ್ನೆ ತಡರಾತ್ರಿಯೂ ಪತ್ನಿಯ ಮೇಲೆ ಹಲ್ಲೆಗೈದು ಬಳಿಕ ಕುಡಿದ ಮತ್ತಿನಲ್ಲಿ ಮಾರಕಾಸ್ತ್ರದಿಂದ ಕುತ್ತಿಗೆ ಸೀಳಿ ಹತ್ಯೆಗೈದ್ದಿದ್ದಾನೆ. ಚಂದಬಾಯಿ ರಕ್ತದ ಮಡುವಿನಲ್ಲಿ ನರಳಾಡಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಪತಿ ಜಗದೀಶ್ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಈ ಬಗ್ಗೆ ನ್ಯೂ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.