ಕಲಬುರಗಿ: ಸರ್ಕಾರ ಕೋಟ್ಯಂತರ ರೂಪಾಯಿ ಅನುದಾನ ನೀಡಿ ಸಾರ್ವಜನಿಕರಿಗೆ ಉಪಯೋಗವಾಲೆಂದು ಆಸ್ಪತ್ರೆ ನಿರ್ಮಾಣ ಮಾಡುತ್ತದೆ. ಆದರೆ ಗುತ್ತಿಗೆದಾರರು ಮಾತ್ರ ಕಳಪೆ ಕಟ್ಟಡ ನಿರ್ಮಾಣ ಮಾಡಿ ಅನುದಾನದ ಹಣವನ್ನು ಕಬಳಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಆಳಂದ ತಾಲೂಕಿನ ಯಳಸಂಗಿ ಗ್ರಾಮದಲ್ಲಿ 2016ರಲ್ಲಿ 1.25 ಕೋಟಿ ವೆಚ್ಚದಲ್ಲಿ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಕಳಪೆ ಕಾಮಗಾರಿಯಿಂದ ಹೊಸ ಕಟ್ಟಡದಲ್ಲಿಯೇ ಮಳೆ ನೀರು ಸೋರುತ್ತಿದೆ. ಮೇಲ್ಛಾವಣಿ ಸಂಪೂರ್ಣವಾಗಿ ಕಿತ್ತು ಹೋಗಿದ್ದು, ಗೋಡೆಗಳು ಬಿರುಕು ಬಿಟ್ಟಿವೆ.
ಆಸ್ಪತ್ರೆಗೆ ಬರುವ ರೋಗಿಗಳು ಸೋರುವ ಕಟ್ಟದಲ್ಲೇ ಚಿಕಿತ್ಸೆ ಪಡೆದುಕೊಳ್ಳುವಂತಾಗಿದೆ. ಸಿಬ್ಬಂದಿಗೆ ಪ್ರತಿನಿತ್ಯ ಈ ನೀರು ತೆಗೆದು ಹಾಕುವುದೇ ಕೆಲಸವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.