ಕಲಬುರಗಿ: ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು ಸುಮಾರು 10 ವರ್ಷ ಕಳೆದರೂ, ಇಲ್ಲಿಯವರೆಗೂ ಕಲಬುರಗಿ ಜಿಲ್ಲಾ ವೀರಶೈವ ಮಹಾಸಭೆಗೆ ಚುನಾವಣೆ ನಡೆಯದಿರುವುದು ಖಂಡನೀಯ. ಕೂಡಲೇ ವೀರಶೈವ ಮಹಾಸಭೆಯ ಜಿಲ್ಲಾ ಘಟಕಕ್ಕೆ ಚುನಾವಣೆ ನಡೆಸಿ ಸದಸ್ಯರನ್ನು ಆಯ್ಕೆ ಮಾಡಬೇಕಾಗಿ ವೀರಶೈವ ಮಹಾಸಭೆಯ ಸದಸ್ಯ ಎಮ್.ಎಸ್.ಪಾಟೀಲ್ ನರಿಬೋಳ ಆಗ್ರಹಿಸಿದರು.
ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಎಮ್.ಎಸ್.ಪಾಟೀಲ್ ನರಿಬೋಳ, ವೀರಶೈವ ಮಹಾಸಭೆ ಅಸ್ತಿತ್ವಕ್ಕೆ ಬಂದು 10 ವರ್ಷವಾದ್ರೂ ಕಲಬುರಗಿ ಜಿಲ್ಲಾ ಘಟಕಕ್ಕೆ ಸದಸ್ಯರನ್ನು ಆಯ್ಕೆ ಮಾಡದೆ, ಮಹಾಸಭೆ ರಾಷ್ಟ್ರೀಯ ಮುಖಂಡರು ಕುಂಟು ನೆಪ ಹೇಳುತ್ತಿದ್ದಾರೆ. ಮಹಾಸಭೆಗೆ ಚುನಾವಣೆ ನಡೆಸಲು ಸಾವಿರ ಸದಸ್ಯರು ಕಲಬುರಗಿಯಲ್ಲಿ ಇಲ್ಲ ಎಂದು ಹೇಳುತ್ತಿದ್ದಾರೆ. ಅನೇಕರು ಸಮಾಜವನ್ನು ಆರ್ಥಿಕವಾಗಿ ಬಲಾಢ್ಯವಾಗಿಸಲು ದುಡ್ಡು ನೀಡಲು ಸಹ ಸಿದ್ದರಿದ್ದಾರೆ. ಆದರೆ ರಾಷ್ಟ್ರೀಯ ಅಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳು ಇಲ್ಲಸಲ್ಲದ ಸುಳ್ಳು ನೆಪ ಹೇಳಿ ಚುನಾವಣೆಯನ್ನು ಮುಂದೂಡುತ್ತಲೇ ಇದ್ದಾರೆ ಎಂದು ಗುಡುಗಿದರು.
ಚುನಾವಣೆ ನಡೆಸುವಂತೆ ಆಗ್ರಹಿಸಿ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಶಾಮನೂರ ಶಿವಶಂಕ್ರಪ್ಪ, ಮಹಾ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ, ಉಪಾಧ್ಯಕ್ಷರಾದ ಶಂಕರ್ ಬಿದರಿ ಮತ್ತು ಗುರಮ್ಮ ಸಿದ್ದಾರೆಡ್ಡಿಯವರನ್ನು ಒತ್ತಾಯಿಸಲು ಬೆಂಗಳೂರಿಗೆ ವಿಶೇಷ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು. ಒಂದು ವೇಳೆ ತಿಂಗಳಲ್ಲಿ ಚುನಾವಣೆ ನಡೆಸದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವುದಾಗಿ ಪಾಟೀಲ್ ಎಚ್ಚರಿಕೆ ನೀಡಿದರು.
ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮಕ್ಕೆ ಮನವಿ ಸ್ವಾಗತಾರ್ಹ. ಇನ್ನೂ ವೀರಶೈವರ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ನೀಡಿರುವುದನ್ನು ಸ್ವಾಗತಿಸುತ್ತೇವೆ ಎಂದರು.