ಕಲಬುರಗಿ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಕಲಬುರಗಿಯ ಪತ್ರಿಕಾಭವನದಲ್ಲಿ ಸಮ್ಮೇಳನ ಮತ್ತು ಅಪರೂಪದ ಛಾಯಾಚಿತ್ರ ಪ್ರದರ್ಶನ ಹಾಗೂ ವಿಚಾರ ಗೋಷ್ಠಿ ಆಯೋಜಿಸಲಾಗಿತ್ತು.
ಜಿಲ್ಲಾಡಳಿತ, ಪತ್ರಕರ್ತ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಸಮಾರಂಭಕ್ಕೆ ಜಿಲ್ಲಾಧಿಕಾರಿ ಬಿ.ಶರತ್ ಚಾಲನೆ ನೀಡಿದರು. ಕಲಬುರಗಿ ಹಿರಿಯ ಛಾಯಾಗ್ರಾಹಕ ಶಿವಶರಣ ಗೋಗಿ ಹಾಗೂ ಯುವ ಛಾಯಾಗ್ರಾಹಕರು ಸೆರೆ ಹಿಡಿದಿದ್ದ ವಿಭಿನ್ನ ಮತ್ತು ಆಕರ್ಷಕ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸುಮಾರು 200ಕ್ಕೂ ಅಧಿಕ ಛಾಯಾಚಿತ್ರಗಳು ಪ್ರದರ್ಶನದಲ್ಲಿ ರಾರಾಜಿಸಿದವು. ಕಲಬುರಗಿಯ ಐತಿಹಾಸಿಕ ಕೋಟೆ, ಶರಣರ,ಸೂಫಿ ಸಂತರ ಇತಿಹಾಸ ಸಾರುವ ಅಪರೂಪದ ಛಾಯಾಚಿತ್ರ, ಕಲ್ಲಿನಿಂದ ಕೆತ್ತಲ್ಪಟ್ಟ ಶಿಲಾ ಶಾಸನಗಳು, ಸಮ್ಮೇಳನದ ಸುಂದರ ಚಿತ್ರಗಳು ಎಲ್ಲರ ಗಮನ ಸೆಳೆದವು.
ಪತ್ರಕರ್ತ ಹೃಷಿಕೇಶ್ ಬಹದ್ದೂರ್ ಅವರು "ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮೂಹ ಮಾಧ್ಯಮಗಳ ಪಾತ್ರ" ವಿಷಯದ ಕುರಿತು ಉಪನ್ಯಾಸ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ಪತ್ರಿಕೆಯ ಸಂಪಾದಕರಾದ ಶೀಲಾ ತಿವಾರಿ, ರವಿರಾಜ್ ಹೆಚ್ ಜಿ ದೇವೇಂದ್ರ ಆವಂಟಿ ಸಮಾರಂಭದಲ್ಲಿದ್ದರು.