ಕಲಬುರಗಿ: ಅಳಿಯನೇ ಸುಪಾರಿ ಕೊಟ್ಟು ಮಾವನನ್ನು ಕೊಲೆ ಮಾಡಿಸಿದ ಸೇಡಂ ಬಿಜೆಪಿ ಮುಖಂಡನ ಕೊಲೆ ಪ್ರಕರಣ ಮಾಸುವ ಮುನ್ನವೇ ಇದೀಗ ಮತ್ತೊಂದು ಸುಪಾರಿ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಹೆಂಡತಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದಾನೆಂದು ವ್ಯಕ್ತಿಯನ್ನು ಕೊಲೆಗೈದು ಕೈಕಾಲು ಕಟ್ಟಿ ಕಾಲುವೆಗೆ ಎಸೆದಿದ್ದ ನಾಲ್ವರು ಆರೋಪಿಗಳನ್ನ ಯಡ್ರಾಮಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಯಾದಗಿರಿ ಜಿಲ್ಲೆ ಸುರಪುರ ನಿವಾಸಿಯಾಗಿದ್ದ ಚಾಂದಪಾಶ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಗ್ರಾಮದ ರೆಹಮಾನ್ ಶಬುದ್ದೀನ್ ಕೌತಾಳ (23), ಸೈಯದ್ ಶಬುದ್ದೀನ್ ಕೌತಾಳ್(23), ಪ್ರಭುಗೌಡ ಬಿರಾದಾರ್(22) ಹಾಗೂ ಹುಣಸಗಿ ತಾಲೂಕಿನ ದೇವತ್ಕಲ್ ಗ್ರಾಮದ ಮಲ್ಲಿಕಾರ್ಜುನ ಲಕ್ನಾಪುರ್ (21) ಎಂಬುವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಮಾಹಿತಿ ನೀಡಿದರು.
ಪ್ರಕರಣ ಹಿನ್ನೆಲೆ.. ಸೆ. 10 ರಂದು ಯಡ್ರಾಮಿ ಠಾಣಾ ವ್ಯಾಪ್ತಿಯ ಬಳಬಟ್ಟಿ ಕಾಲುವೆಯಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ತಲೆ ಮೇಲೆ ಕಲ್ಲುಹಾಕಿ, ಕೈಕಾಲು ಕಟ್ಟಿ ಬಿಸಾಡಲಾಗಿತ್ತು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಮೃತ ವ್ಯಕ್ತಿ ಧರಿಸಿದ್ದ ಶರ್ಟ್ ಮೇಲೆ ಬಾಂಬೆ ಟೈಲರ್ ಸುರಪುರ ಎಂದು ವಿಳಾಸ ಇತ್ತು. ಅಲ್ಲದೆ ಪ್ಯಾಂಟ್ ಜೇಬ್ ನಲ್ಲಿ ಸ್ಕ್ರೂಡ್ರೈವರ್ ಪತ್ತೆಯಾಗಿತ್ತು. ಎರಡು ಸುಳಿವನ್ನು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಮೃತ ವ್ಯಕ್ತಿ ಚಾಂದಪಾಶ, ವೃತ್ತಿಯಲ್ಲಿ ಇವರು ಎಲೆಕ್ಟ್ರಿಷಿಯನ್ ಅನ್ನೋದು ತಿಳಿದುಬಂದಿತ್ತು.
ರೆಹಮಾನ್ ಕೌತಾಳ ಪತ್ನಿ ಜತೆ ಕೊಲೆಯಾದ ಚಾಂದಪಾಶ ವಿವಾಹೇತರ ಸಂಬಂಧ ಹೊಂದಿದ್ದರು. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಂಬಂಧ ಮುಂದುವರೆದಿತ್ತು. ಇದರಿಂದ ಬೇಸತ್ತ ರೆಹಮಾನ್, ಪ್ರಭುಗೌಡ ಹಾಗೂ ಮಲ್ಲಿಕಾರ್ಜುನ್ ಗೆ ತಲಾ 60 ಸಾವಿರದಂತೆ ಕೊಲೆಗೆ ಸುಪಾರಿ ನೀಡಿದ್ದನಂತೆ. ಸುಪಾರಿ ಪಡೆದ ಪ್ರಭುಗೌಡ ಕಳೆದ ಸೆ.4 ರಂದು ಚಾಂದಪಾಶ ಅವರನ್ನು ಕರೆಂಟ್ ದುರಸ್ತಿ ನೆಪದಲ್ಲಿ ಮನೆಗೆ ಕರೆಸಿ ಹಲ್ಲೆ ಮಾಡಿದ್ದು, ಬಳಿಕ ಕಾರಿನಲ್ಲಿ ಯಾದಗಿರಿ ಜಿಲ್ಲೆಯ ಕೊಡೇಕಲ್ ಕಾಲುವೆ ಬಳಿ ಕರೆದೊಯ್ದಿದ್ದರು. ಅಲ್ಲಿ ಕೈಕಾಲು ಕಟ್ಟಿ ಕಾಲುವೆಗೆ ಬಿಸಾಡಿದ್ದರು. 50 ಕಿ.ಮೀ ಮುಂದೆ ಕ್ರಮಿಸಿ ಬಳಬಟ್ಟಿ ಕಾಲುವೆ ಬಳಿ ಸೆ. 10 ರಂದು ಶವ ತೇಲಿಬಂದಿತ್ತು. ಈ ಜಾಡು ಹಿಡಿದು ಹೋದ ಪೊಲೀಸರು ಸುಪಾರಿ ನೀಡಿದ ರೆಹಮಾನ್ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿರುವುದಾಗಿ ಎಸ್ಪಿ ವಿವರಿಸಿದರು.
ಇದನ್ನು ಓದಿ :ಕೈಕಾಲು ಕಟ್ಟಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ