ಕಲಬುರಗಿ: ಜಗಳ ಬಿಡಿಸಲು ಬಂದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಿಗೆ ಆರು ತಿಂಗಳು ಜೈಲು ಶಿಕ್ಷೆ ಹಾಗೂ 4 ಸಾವಿರ ರೂಪಾಯಿ ದಂಡ ವಿಧಿಸಿ ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ನಗರದ ಮೇತಾರಗಲ್ಲಿ ನಿವಾಸಿಗಳಾದ ವಿಕಾಸ ಟಾಕ ಹಾಗೂ ಸುನಿಲ್ ಸೌದಾಗರ್ ಶಿಕ್ಷೆಗೆ ಗುರಿಯಾದ ಆಪಾದಿತರು. 2011 ಅಕ್ಟೋಬರ್ 8 ರಂದು ಆರೋಪಿಗಳು ಪರಸ್ಪರ ಜಗಳವಾಡುತ್ತಿದ್ದಾಗ ಬ್ರಹ್ಮಪೂರ ಠಾಣೆ ಎಎಸ್ಐ ಕಾಶಿನಾಥ ಜಗಳ ಬಿಡಿಸಲು ಮಧ್ಯಪ್ರವೇಶ ಮಾಡಿದ್ದರು. ಆಗ ಆರೋಪಿಗಳು ಕಾಶಿನಾಥ ಅವರಿಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದರು.
ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ದೊಷಾರೋಪಣಾ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ 5ನೇ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಆರು ತಿಂಗಳ ಸಾದಾ ಶಿಕ್ಷೆ ಮತ್ತು 4 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.