ಕಲಬುರಗಿ: ಕರ್ನಾಟಕದಿಂದ ತೆಲಂಗಾಣಕ್ಕೆ ಅಕ್ರಮ ಗುಟ್ಕಾ ಹಾಗೂ ತಂಬಾಕು ಉತ್ಪನ್ನಗಳನ್ನು ಸಾಗಾಟ ಮಾಡುತ್ತಿದ್ದ ಟೆಂಪೊ ಟ್ರಕ್ ಅನ್ನು ಕಾಳಗಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸುಮಾರು 17 ಲಕ್ಷ ಮೌಲ್ಯದ ತಂಬಾಕು ಉತ್ಪನ್ನಗಳನ್ನು ವಶಕ್ಕೆ ಪಡೆದ ಪೊಲೀಸರು, ಚಾಲಕ ಸುನೀಲ್ ಯಾಧವನನ್ನು ಬಂಧಿಸಿದ್ದಾರೆ. ಕರ್ನಾಟಕದ ವಿಜಯಪುರದಿಂದ ಕಾಳಗಿ ಮೂಲಕ ತೆಲಂಗಾಣದತ್ತ ಹೊರಟ್ಟಿದ್ದ ಟೆಂಪೊ ಟ್ರಕ್‌ನ್ನು ಕಾಳಗಿಯ ಅಂಬೇಡ್ಕರ್ ಸರ್ಕಲ್ ಹತ್ತಿರ ತಡೆದು ವಿಚಾರಣೆ ನಡೆಸಿದಾಗ ಅಕ್ರಮ ಬಯಲಿಗೆ ಬಂದಿದೆ. ತೆಲಂಗಾಣ ಮೂಲದ ಲಾರಿಯಲ್ಲಿ ತಂಬಾಕು ಉತ್ಪನ್ನಗಳನ್ನು ಉಪ್ಪಿನಕಾಯಿ ಡಬ್ಬಿಗಳನ್ನಿಟ್ಟು ಮುಚ್ಚಿ ಅನುಮಾನ ಬಾರದಂತೆ ವ್ಯವಸ್ಥಿತವಾಗಿ ಸಾಗಾಟ ಮಾಡಲಾಗುತ್ತಿತ್ತು.
ಡ್ರಗ್, ಗಾಂಜಾ ನಂತರ ಇದೀಗ ಗುಟ್ಕಾ ಸರದಿ ಆರಂಭವಾಗಿದೆ. ಅಕ್ರಮ ಸಾಗಾಟದ ಹಿಂದೆ ದೊಡ್ಡ ಜಾಲ ಇರುವ ಶಂಕೆ ವ್ಯಕ್ತವಾಗಿದೆ. ಸಿಪಿಐ ಕಲ್ಲದೇವರು, ಪಿಎಸ್ಐ ವಿಜಯಕುಮಾರ ಅವರ ಮಾರ್ಗದರ್ಶನದಲ್ಲಿ ಎಎಸ್ಐ ಶರಣಪ್ಪ ಹಾಗೂ ಸಿಬ್ಬಂದಿಯಾದ ನಾಗೇಶ್, ಹುಸೇನ್, ಸಂಗಣ್ಣ, ಇರ್ಫಾನ್, ಪ್ರಕಾಶ, ಮಂಜುನಾಥ, ಬಸಪ್ಪ, ಮಾರುತಿ, ಜೈ ಸಿಂಗ್ ಕಾರ್ಯಾಚರಣೆ ನಡೆಸಿ ಅಕ್ರಮ ಸಾಗಾಟ ಬಯಲಿಗೆಳೆದಿದ್ದಾರೆ. ಸದ್ಯ ಕಾಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.