ಕಲಬುರಗಿ: ಕೊರೊನಾ ಭೀತಿ ನಡುವೆಯೂ ಶ್ರಾವಣ ಮಾಸದ 2ನೇ ಸೋಮವಾರವಾದ ಇಂದು ಕಲ್ಯಾಣ ಕರ್ನಾಟಕ ಜನರ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ.
ಪ್ರತಿವರ್ಷ ಶ್ರಾವಣದ ಸೋಮವಾರ ಶರಣಬಸವೇಶ್ವರ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಹರಿದು ಬರ್ತಾರೆ. ಜಾತ್ರೆ ಮಾದರಿಯಲ್ಲಿ ಪೂಜೆ ಪುನಸ್ಕಾರಗಳನ್ನು ನೆರವೇರಿಸಲಾಗುತ್ತದೆ. ಉತ್ತರ ಕರ್ನಾಟಕ ಸೇರಿ ದೂರ ದೂರದ ಊರುಗಳಿಂದ ಪಾದಯಾತ್ರೆ ಮೂಲಕ ಭಕ್ತರು ಬರುವ ಪದ್ಧತಿ ಇಲ್ಲಿದೆ. ಆದ್ರೆ ಈ ಬಾರಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ದೇವಸ್ಥಾನಕ್ಕೆ ಬಾರದಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿಕೊಂಡರು. ಜಿಲ್ಲೆಯ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಗಣರು ದೇವಸ್ಥಾನಕ್ಕೆ ಬಂದಿದ್ದಾರೆ.
ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಸುಮಾರು 2 ಕಿ.ಮೀ ದೂರದವರೆಗೆ ಸರದಿ ಸಾಲಿನಲ್ಲಿ ದರ್ಶನಕ್ಕೆ ಕಾಯ್ದು ನಿಂತಿದ್ದಾರೆ. ದೇವಸ್ಥಾನ ಪ್ರವೇಶ ದ್ವಾರದಲ್ಲಿ ಸ್ಕ್ರಿನಿಂಗ್ ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ. ದೇವಸ್ಥಾನಕ್ಕೆ ಪ್ರತಿ ಅರ್ಧಗಂಟೆಗೊಮ್ಮೆ ಸ್ಯಾನಿಟೈಸರ್ ಮಾಡಲಾಗುತ್ತಿದೆ. ಕೊರೊನಾ ಹರಡದಂತೆ ಸಾಕಷ್ಟು ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಭಕ್ತರು ನಿಯಮಗಳ ಪಾಲನೆಯೊಂದಿಗೆ ಶರಣಬಸವೇಶ್ವರರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.