ಕಲಬುರಗಿ: ಕಳ್ಳರು ಜಾಗಿಂಗ್ ಸೋಗಿನಲ್ಲಿ ಬಂದು ಚಿನ್ನದ ಅಂಗಡಿಗೆ ಕನ್ನ ಹಾಕಿರುವ ಘಟನೆ ಚಿತ್ತಾಪುರ ತಾಲೂಕು ವಾಡಿ ಪಟ್ಟಣದಲ್ಲಿ ನಡೆದಿದೆ. ಅಂಗಡಿ ಶಟರ್ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಕದ್ದೊಯ್ದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಾಡಿ ಪಟ್ಟಣ ಸಂತೋಷ್ ಮಾಳಿ ಎಂಬುವರಿಗೆ ಸೇರಿದ ಜ್ಯುವೆಲ್ಲರಿ ಅಂಗಡಿಯಲ್ಲಿ ಕಳ್ಳರು ದುಷ್ಕೃತ್ಯ ಎಸಗಿದ್ದಾರೆ. ಗುರುವಾರ 3.30 ರ ಸುಮಾರಿಗೆ ಜಾಗಿಂಗ್ ಸೋಗಿನಲ್ಲಿ ಬಂದಿದ್ದ ಖದೀಮರು ಅಂಗಡಿಯ ಶಟರ್ ಮುರಿದು ಇಬ್ಬರು ಕಳ್ಳರು ಒಳ ನುಸುಳಿದ್ದಾರೆ. ನಂತರ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದು ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ.
ಕಳ್ಳರು ನಿರ್ಭಯವಾಗಿ ಕಳ್ಳತನ ಮಾಡಿದ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಪರಿಶೀಲಿಸಿದ್ದಾರೆ. ಈ ಕುರಿತು ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಿಸಿಟಿವಿ ಆಧಾರದ ಮೇಲೆ ಕಳ್ಳರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ಶಾಲೆ ಬೀಗ ಮುರಿದು 1 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಕಳವು: ಎರಡು ಶಾಲೆಗಳಲ್ಲಿನ ಬಾಗಿಲಿನ ಬೀಗ ಮುರಿದು 1,02,550 ರೂ.ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಸಬ್ ಅರ್ಬನ್ ಪೊಲೀಸ್ ಠಾಣೆ ವ್ಯಾಪ್ತಿಯ ಅವರಾದ ಬಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಇರುವ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಕಾರ್ಯಾಲಯದ ಬೀಗ ಮುರಿದು 25 ಸಾವಿರ ರೂ ಮೌಲ್ಯದ ಒಂದು ಕಂಪ್ಯೂಟರ್ ಮಾನಿಟರ್ ಹಾಗೂ ಸಿಪಿಯು, 40 ಸಾವಿರ ರೂ.ಮೌಲ್ಯದ ಒಂದು ಡೆಲ್ ಕಂಪನಿ ಲ್ಯಾಪ್‍ಟಾಪ್, ಚಾರ್ಜರ್ ಕಳವು ಮಾಡಲಾಗಿದೆ.
ಅದೇ ಆವರಣದಲ್ಲಿರುವ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಕಾರ್ಯಾಲಯದ ಬಾಗಿಲಿನ ಬೀಗ ಮುರಿದು 15 ಸಾವಿರ ರೂ ಮೌಲ್ಯದ ಸಿಪಿಯು, 2,200 ರೂ.ಮೌಲ್ಯದ 1 ವಾಲ್ ಫ್ಯಾನ್, 150 ರೂ ಮೌಲ್ಯದ 1 ಜಂಕ್ಷನ್ ಬಾಕ್ಸ್ ಸೇರಿ 1 02,550 ರೂ.ಮೌಲ್ಯದ ವಸ್ತುಗಳನ್ನು ಕದ್ದೊಯ್ದಿದ್ದಾರೆ ಎಂದು ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಪರಮೇಶ್ವರ ಧನ್ನಿ ಅವರು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಶುರು ಮಾಡಿದ್ದಾರೆ.
ಗೃಹ ಲಕ್ಷ್ಮಿ ನೋಂದಣಿ ಮಾಡಿಸು ಎಂದು ನಂಬಿಸಿ ವೃದ್ಧೆಯ ಚಿನ್ನದ ಸರ ಕದ್ದು ಕಳ್ಳ ಪರಾರಿ: ಗೃಹಲಕ್ಷ್ಮಿ ಯೋಜನೆ ನೋಂದಣಿ ಮಾಡಿಸಿಕೊಡುವುದಾಗಿ ವೃದ್ದೆಯನ್ನು ನಂಬಿಸಿ ಅಪರಿಚಿತ ವ್ಯಕ್ತಿಯೊಬ್ಬ 40 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಗರದ ಅಂಚೆ ಕಚೇರಿ ಬಳಿ ನಡೆದಿದೆ. ಹಾರೋಕೊಪ್ಪ ಗ್ರಾಮದ ಸಾವಿತ್ರಮ್ಮ ಎಂಬ ಮಹಿಳೆ ಆಸ್ಪತ್ರೆ ಯಲ್ಲಿ ದಾಖಲಾಗಿದ್ದ ತಮ್ಮ ಮಗನನ್ನು ನೋಡಲು ಮಂಡ್ಯ ಆಸ್ಪತ್ರೆಗೆ ಹೋಗಿ, ಸ್ವ ಗ್ರಾಮಕ್ಕೆ ಹಿಂತಿರುಗಿ ಚನ್ನಪಟ್ಟಣಕ್ಕೆ ಬಂದಿದ್ದ ವೇಳೆ ಈ ಕಳ್ಳತನ ಜರುಗಿದೆ.
ಒಂಟಿಯಾಗಿದ್ದ ಈಕೆಯ ಬಳಿ ಬಂದಿದ್ದ ಅಪರಿಚಿತ ವ್ಯಕ್ತಿ ನಿಮಗೆ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಮಾಡಿಸಿಕೊಡುತ್ತೇನೆ ಎಂದು ನಂಬಿಸಿ ವೈದ್ಯರ ಸಹಿ ಬೇಕೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಆಸ್ಪತ್ರೆ ಬಳಿ ವೈದ್ಯರು ನಿನ್ನ ಕುತ್ತಿಗೆಯಲ್ಲಿರುವ ಸರ ನೋಡಿದರೆ ಸಹಿ ಮಾಡುವುದಿಲ್ಲ ಎಂದು ನಂಬಿಸಿದ್ದಾನೆ. ಚಿನ್ನದ ಸರ ತೆಗೆಯಿಸಿ ಪರ್ಸ್ ನಲ್ಲಿ ಹಾಕುವಂತೆ ಹೇಳಿದ್ದಾನೆ. ಅವನು ಹೇಳಿದಂತೆ ವೃದ್ಧೆ ಪರ್ಸ್ ದಲ್ಲಿ ಇಟ್ಟುಕೊಂಡಿದ್ದಾಳೆ. ಈ ಸಮಯದಲ್ಲಿ ಆಕೆಗೆ ಕಾಣದಂತೆ 40 ಗ್ರಾಂ ಚಿನ್ನದ ಸರವನ್ನು ತೆಗೆದುಕೊಂಡು, ಅಂಚೆ ಕಚೇರಿ ಬಳಿ ಕರೆ ತಂದು ಕೂರಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.
ಈ ಕಳ್ಳತನ ಘಟನೆಗೆ ಸಂಬಂಧಿಸಿದಂತೆ ಚನ್ನಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪೊಲೀಸರು ಸಿಸಿ ಟಿವಿ ಪರಿಶೀಲನೆ ನಡೆಸಿ ಆರೋಪಿ ಪತ್ತೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಇದನ್ನೂಓದಿ:ಡೀಸೆಲ್ ಕದಿಯಲು ಬಂದು ಸಿಕ್ಕಿಬಿದ್ದ ಕಳ್ಳ.. ಚಾಲಕರಿಂದ ಹಲ್ಲೆಗೊಳಗಾಗಿ ಸಾವು