ಕಲಬುರಗಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಂತೆ ರಾಜಕೀಯ ನಾಯಕರ ವಾಕ್ಸಮರ ಜೋರಾಗಿ ನಡೆಯುತ್ತಿದೆ. ಕಲಬುರಗಿ ದಕ್ಷಿಣ ಮತಕ್ಷೇತ್ರದಲ್ಲಿ ಮಾತಿನ ಸಮರ ಒಂದು ಹೆಜ್ಜೆ ಮುಂದೆ ಇದ್ದು, ಏಕ ವಚನದಲ್ಲಿಯೇ ಹಾಲಿ ಮತ್ತು ಮಾಜಿ ಶಾಸಕರು ಮಾತಿನ ಕೆಸರೆರಚಾಟ ಮಾಡುತ್ತಿದ್ದಾರೆ.
ಪಿಎಸ್ಐ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಜೈಲು ಪಾಲಾಗಿದ್ದ ಮಹಾಂತೇಶ ಪಾಟೀಲ್ ಬಿಡುಗಡೆಯಾಗಿ ಬಂದ ನಂತರ ಸನ್ಮಾನ ಮಾಡಿದ ವಿಷಯವಾಗಿ ಹಾಲಿ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಕಾಂಗ್ರೆಸ್‌ನ ಮಾಜಿ ವಿಧಾನಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ನಡುವಿನ ಮಾತಿನ ಸಮರ ತಾರಕಕ್ಕೇರಿದೆ. ಅಲ್ಲಮಪ್ರಭು ಪಾಟೀಲ್ ವಿರುದ್ಧ ಏಕ ವಚನದಲ್ಲಿ ಪ್ರಹಾರ ನಡೆಸಿದ ಶಾಸಕ ರೇವೂರಗೆ ಜೈಲಿಗೆ ಹೋಗಬೇಕಾಗುತ್ತೆ ಹುಷಾರ್ ಎಂದು ಮಾಜಿ ಶಾಸಕ ಪಾಟೀಲ್ ಚಾಟಿ ಬೀಸಿದ್ದಾರೆ.
ದಂಧೆಕೋರರನ್ನು ಸಲಹುವುದು ಕಾಂಗ್ರೆಸ್ ಸಂಸ್ಕೃತಿ: ಮಹಾಂತೇಶ ಪಾಟೀಲ್ ಜೈಲಿನಿಂದ ಬಿಡುಗಡೆಯಾದ ದಿವಸ ಅಭಿಮಾನಿಗಳು ಅವರ ಮನೆಗೆ ತೆರಳಿ ಅಭಿನಂದಿಸಿ ಗೌರವಿಸಿದ್ದರು. ಈ ವೇಳೆ ಅಲ್ಲಮಪ್ರಭು ಪಾಟೀಲ್ ಕೂಡ ಅಲ್ಲಿಯೇ ಹಾಜರಿದ್ದ ವಿಡಿಯೋ ವೈರಲ್ ಆಗಿ ಮಾಧ್ಯಮಗಳಲ್ಲಿ ಸುದ್ದಿ ಆಗಿತ್ತು. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಅಕ್ರಮ ಮಾಡೋದು, ಅಕ್ರಮ ದಂಧೆಕೋರರನ್ನು ಸಲಹುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ ಎಂದು ಕಿಡಿಕಾರಿದರು.
ಏಕ ವಚನದಲ್ಲಿ ವಾಗ್ದಾಳಿ: ಅಲ್ಲಮಪ್ರಭು ಪಾಟೀಲ್ಗೆ ವಯಸ್ಸಾದಂತೆ ಬುದ್ಧಿ ಭ್ರಮಣೆ ಆಗಿದೆ. ಲಕ್ಷಾಂತರ ಯುವಕರ ಜೀವನದಲ್ಲಿ ಚೆಲ್ಲಾಟ ಆಡಿದ ಆರೋಪಿ ಬಿಡುಗಡೆ ಆಗಿ ಬಂದಾಗ ಅವರ ಮನೆಗೆ ಹೋಗಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದು ಎಷ್ಟು ಸರಿ?. ಅಲ್ಲಮಪ್ರಭು ಪಾಟೀಲ್ಗೆ ನೈತಿಕತೆ ಇಲ್ಲ. ನಾಚಿಕೆ ಬರಬೇಕು ಎಂದೆಲ್ಲಾ ಏಕ ವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಮಂಗಳೂರು ಕುಕ್ಕರ್ ಜೊತೆಗೆ ಬೆಳಗಾವಿ ಕುಕ್ಕರ್ ಮೇಲೂ ಡಿಕೆಶಿಗೆ ಪ್ರೀತಿ : ಯತ್ನಾಳ್ ವ್ಯಂಗ್ಯ
ಇನ್ನು, ರೇವೂರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅಲ್ಲಮಪ್ರಭು ಪಾಟೀಲ್, ಶಾಸಕನಾದವರಿಗೆ ಮಾತಿನ ಮೇಲೆ ಹಿಡಿತ ಇರಲಿ. ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದ್ದಾರೆ. ಯಾರಿಗೆ ವಯಸ್ಸಾಗಿದೆ. ಯಾರಿಗೆ ತೆಲೆಕೆಟ್ಟಿದೆ. ನಿಮ್ಮ ಪಕ್ಷದಲ್ಲಿ ಯಾರಿಗೂ ವಯಸ್ಸಾಗಿಲ್ವಾ? ಯಡಿಯುರಪ್ಪರಿಗೂ ವಯಸ್ಸಾಗಿದೆ. ಅವರು ಕೂಡ ಆರೋಪಿ ಅವರು ಜೈಲಿಗೆ ಹೋಗಿ ಬಂದಿದ್ದಾರೆ. ಅವರ ಮಗನ ಮೇಲೆ ಸಹ ಪಿಎಸ್ಐ ಹಗರಣ ಆರೋಪವಿದೆ. ರೌಡಿಗಳನ್ನು ಸಲಹುವುದು ನೀವು ಎಂದು ತಿರುಗೇಟು ಕೊಟ್ಟಿದ್ದಾರೆ.