ಕಲಬುರಗಿ: ಏನಾದ್ರು ಸಿಕ್ರೆ ಸಾಕು, ನನಗಿಷ್ಟು, ನಿನಗಿಷ್ಟು ಎಂದು ಹಂಚಿಕೊಂಡು ಸುಮ್ಮನಾಗೋ ಜನರ ಮಧ್ಯೆ ಕಲಬುರಗಿ ರೈಲ್ವೆ ಪೊಲೀಸ್(ಆರ್,ಪಿ.ಎಫ್) ಅಧಿಕಾರಿಗಳು ರೈಲು ನಿಲ್ದಾಣದಲ್ಲಿ ಸಿಕ್ಕಿದ್ದ ಚಿನ್ನಾಭರಣದ ವ್ಯಾನಿಟಿ ಬ್ಯಾಗನ್ನು ಅದರ ವಾರಸುದಾರಿಗೆ ಹಿಂದಿರುಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ರೈಲ್ವೆ ಪೊಲೀಸ್ ಇಲಾಖೆಯ ಸಿಬ್ಬಂದಿ ರವಿಕುಮಾರ್ ಬಿರಾದಾರ ಹಾಗೂ ವಿ.ಜಿ. ಚವ್ಹಾಣ್ ಅವರು ರೈಲ್ವೆ ಫ್ಲಾಟ್‌ಫಾರಂನಲ್ಲಿ ಗಸ್ತು ತಿರುಗುವಾಗ ಬ್ಯಾಗ್ ಕಣ್ಣಿಗೆ ಬಿದ್ದಿತ್ತು. ಅದನ್ನು ನೋಡಿದ ಸಿಬ್ಬಂದಿ ಬ್ಯಾಗ್ನಲ್ಲಿ ಏನಿದೆ ಎಂದು ಪರೀಶಿಲಿಸಿದಾಗ 5ಲಕ್ಷ ರೂಪಾಯಿ ಬೆಲೆಬಾಳುವ 150 ಗ್ರಾಂ ಚಿನ್ನಾಭರಣ, ಒಂದು ಟ್ಯಾಬ್, ಒಂದು ಟಚ್ ಸ್ಕ್ರೀನ್ ಮೊಬೈಲ್ ಕಂಡುಬಂದಿತ್ತು. ಬಳಿಕ ಸಿಬ್ಬಂದಿ ಆ ಬ್ಯಾಗ್ನ್ನು ತಮ್ಮ ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದರು.
ಪ್ಯಾಸೆಂಜರ್ ದಂಪತಿ ಕಲಬುರಗಿಯಿಂದ ವಾಡಿಗೆ ತೆರಳುವಾಗ ಅವಸರದಲ್ಲಿ ಬ್ಯಾಗ್ ಅನ್ನು ಫ್ಲಾಟ್ ಫಾರಂ ಮೇಲೆ ಮರೆತು ಹೋಗಿದ್ದರು. ಇದನ್ನು ತಿಳಿದ ಪೊಲೀಸರು ಅವರನ್ನು ಠಾಣೆಗೆ ಕರೆಯಿಸಿ ಬ್ಯಾಗ್ ಮರಳಿಸಿದ್ದಾರೆ. ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.