ಕಲಬುರಗಿ: ಶೈಕ್ಷಣಿಕವಾಗಿ ಹಿಂದುಳಿದಿದೆ ಎಂಬ ಹಣೆಪಟ್ಟಿ ಹೊತ್ತ ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕಿ ಈಗ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುವ ಮೂಲಕ ಎಲ್ಲರ ಮೆಚ್ಚುಗೆ ಜೊತೆಗೆ ಮಾದರಿಯಾಗಿದ್ದಾರೆ.
ಜಿಲ್ಲೆಯ ಅಫಜಲಪುರ ತಾಲೂಕಿನ ಬಂದರವಾಡ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ವಿಷಯದ ಶಿಕ್ಷಕಿ ಸುರೇಖಾ ಅವರಿಗೆ ರಾಷ್ಟ್ರ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದಿದ್ದಾರೆ. ಆ ಮೂಲಕ ಕಲಬುರಗಿ ಜಿಲ್ಲೆಯ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಶಿಕ್ಷಕಿ ಸುರೇಖಾ ಅವರು ವಿಭಿನ್ನ ಬೋಧನಾ ಶೈಲಿಯಿಂದ ಪ್ರಯೋಗಾತ್ಮಕ ಶಿಕ್ಷಣದದಿಂದ ರಾಷ್ಟ್ರಮಟ್ಟದ ಗಮನ ಸೆಳೆದಿದ್ದು. ಈ ಕೌಶಲ್ಯಕ್ಕೆ ಸರ್ಕಾರ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಕಳೆದ 16 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಸುರೇಖಾ, ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ್ದಾರೆ. ನೂತನ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಮನವರಿಕೆ ಮಾಡಿಸಿ, ಉತ್ತಮ ಫಲಿತಾಂಶ ಕೂಡಾ ಬಂದಿದೆ. ಇದರ ಪ್ರತಿಫಲವಾಗಿ ಈಗಾಗಲೇ ಹಲವು ವಿದ್ಯಾರ್ಥಿಗಳು ಉನ್ನತ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಕೇವಲ ಕೊಠಡಿ ಒಳಗೆ ಅಲ್ಲದೇ, ಬೋಧನೆಗೆ ಪೂರಕವಾದ ಪ್ರಾತ್ಯಕ್ಷಿಕೆಗಳನ್ನು ತೋರಿಸಿದ್ದಾರೆ. ಹೃದಯ, ಶ್ವಾಶಕೋಶ, ರಕ್ತ ಪರಿಚಲನೆ ಸೇರಿದಂತೆ ಮಾನವನ ವಿವಿಧ ಅಂಗಗಳ ಕಾರ್ಯನಿರ್ವಹಣೆಯನ್ನು ಜೀವಂತ ಪ್ರಾಣಿಗಳಲ್ಲಿ ತೋರಿಸಿದ್ದಾರೆ. ವಿದ್ಯಾರ್ಥಿಗಳಿಂದಲೇ ಪ್ರಯೋಗ ಮಾಡಿಸುವ ಪರಿಪಾಠ ಇವರದು.
ಇದರಿಂದಲೇ ವಿದ್ಯಾರ್ಥಿಗಳ ಅಚ್ಚುಮೆಚ್ಚಿನ ಶಿಕ್ಷಕಿ ಇವರಾಗಿದ್ದಾರೆ. ಸಜೀವಿಗಳ ಅಂಗಾಗಗಳ ಪರಿಚಯ, ಸಸ್ಯದ ಬೆಳವಣಿಗೆಗಳ ಹಂತಗಳು ಹೀಗೆ ಇವರ ಪಾಠ ಪ್ರವಚನ ಕೇವಲ ಕೋಣೆಗೆ ಸೀಮಿತವಾಗಿ ಇರಲಿಲ್ಲ. ಹೊಲ, ವಿಜ್ಞಾನ ಕೇಂದ್ರ ಹೀಗೆ ಹತ್ತುಹಲವು ಕಡೆ ವಿದ್ಯಾರ್ಥಿಗಳನ್ನು ಕರೆದುಕೊಂಡಿ ಹೋಗುತ್ತಾರೆ.
ಇವರ ಕ್ರಿಯಾಶೀಲ ಬೋಧನೆ ಇದೀಗ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಲಭಿಸುವಂತೆ ಮಾಡಿದೆ.
ಖಾಸಗಿ ಶಾಲೆಗಳಿಗೆ ಪರ್ಯಾಯವಾಗಿ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಬಹುದು ಎಂಬುದಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಕೇವಲ ಸಂಬಳಕ್ಕೆ ಸೀಮಿತವಾಗದೇ ವಿದ್ಯಾರ್ಥಿಗಳು ಶ್ರೇಯೋಭಿವೃದ್ಧಿಗೆ ಶ್ರಮಿಸುವ ಮೂಲಕ ಮಾದರಿ ಶಿಕ್ಷಕಿ ಎನಿಕೊಂಡಿದ್ದಾರೆ.
ಚಿತ್ತಾಪುರ ತಾಲೂಕಿನ ಕೊಡದೂರು ಗ್ರಾಮದಿಂದ ಶಿಕ್ಷಕಿ ವೃತ್ತಿ ಆರಂಭಿಸಿದ ಸುರೇಖಾ ಜಗನ್ನಾಥ ಅವರು ಅಫಜಲಪುರದ ಗೊಬ್ಬರು ಸರ್ಕಾರಿ ಶಾಲೆಯಲ್ಲಿ ಐದು ವರ್ಷ ಸೇವೆ ಸಲ್ಲಿಸಿದ್ದಾರೆ. ಸದ್ಯ ಬಂದರವಾಡ ಎಂಬ ಸಣ್ಣ ಗ್ರಾಮದಲ್ಲಿ ವಿಜ್ಞಾನ ವಿಷಯಕ್ಕೆ ಬೋಧಿಸುತ್ತಿದ್ದಾರೆ.
ಇವರ ಶಿಷ್ಯವೃಂದ ಸೇರಿದಂತೆ ಸಂಬಂಧಿಕರು, ಸಹೋದ್ಯೋಗಿಗಳು, ಹಿತೈಷಿಗಳು ಶುಭಕೋರುತ್ತಿದ್ದಾರೆ. ಸುರೇಖಾ ಅವರಿಗೆ ಸೆಪ್ಟೆಂಬರ್ 5 ರಂದು ಶಿಕ್ಷಕರ ದಿನಾಚರಣೆ ದಿನ ನವದೆಹಲಿಯಲ್ಲಿ ರಾಷ್ಟ್ರಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ನೀಡಿ, ಗೌರವಿಸಲಾಗುತ್ತಿದೆ.