ಕಲಬುರಗಿ : ಕುದಿಯುವ ಸಾಂಬಾರ್ ಕಡಾಯಿಯಲ್ಲಿ ಬಿದ್ದು ಶಾಲಾ ಬಾಲಕಿ ಗಂಭೀರವಾಗಿ ಗಾಯಗೊಂಡ ಘಟನೆ ಅಫಜಲಪುರ ತಾಲೂಕಿನ ಚಿಣಮಗೇರಾ ಗ್ರಾಮದಲ್ಲಿ ನಡೆದಿದೆ. ಚಿಣಮಗೇರಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸಾಂಬಾರ್ ಕಡಾಯಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದ್ದು, ಶೇ. 50 ಕ್ಕಿಂತ ಹೆಚ್ಚು ಸುಟ್ಟು ಗಾಯವಾಗಿದೆ ಎಂದು ತಿಳಿದುಬಂದಿದೆ.
ಶಾಲೆಯಲ್ಲಿ ಮಧ್ಯಾಹ್ನದ ಬಿಸಿ ಊಟ ತಯಾರಿಸಿ ಸಾಂಬಾರ್ ಕಡಾಯಿ ಅಡುಗೆ ಕೋಣೆಯಿಂದ ಹೊರತರುವಾಗ ಈ ಅವಘಡ ಸಂಭವಿಸಿದೆ. ಅಡುಗೆ ಸಿಬ್ಬಂದಿ ಕಡಾಯಿ ಹೊರಗೆ ತರುವಾಗ ಆಟವಾಡುತ್ತ ಓಡೋಡಿ ಬಂದ ಬಾಲಕಿ ಕಡಾಯಿಯಲ್ಲಿ ಬಿದ್ದಿದ್ದಾಳೆ. ತಕ್ಷಣ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಜಿಲ್ಲಾಸ್ಪತ್ರೆಯಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಬಸವೇಶ್ವರ ಆಸ್ಪತ್ರೆಗೆ ಸಾಗಿಸಲಾಗ್ತಿದೆ. ಶಿಕ್ಷಕರು ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ದೌಡಾಯಿಸಿ ಆರೋಗ್ಯ ವಿಚಾರಿಸಿದ್ದಾರೆ. ಅಡುಗೆ ಸಿಬ್ಬಂದಿ ಹಾಗೂ ಶಾಲಾ ಶಿಕ್ಷಕರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಪ್ಪಿತಸ್ಥರನ್ನು ಅಮಾನತು ಮಾಡಿ ಬಾಲಕಿ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ.
ಸುಟ್ಟ ಬಾಲಕಿ ತಾಯಿ ಪಾರ್ವತಿ ಅವರು ಈ ಬಗ್ಗೆ ಮಾತನಾಡಿ, 'ನಮ್ಮ ಮಗಳನ್ನು ಚಿಣಮಗೇರಾ ಗ್ರಾಮ ಸರ್ಕಾರಿ ಶಾಲೆಗೆ ಕಳುಹಿಸಿದ್ದೆವು. ಮಧ್ಯಾಹ್ನ ಊಟಕ್ಕೆ ಬಿಟ್ಟಾಗ ಮಗಳು ಸಾಂಬಾರ್ ಪಾತ್ರೆಗೆ ಬಿದ್ದಿದ್ದಾಳೆ. ಆ ವೇಳೆ ಶಿಕ್ಷಕರು ಅಲ್ಲಿಯೇ ಇದ್ದರು. ಆದ್ರೆ ಯಾರೊಬ್ಬರು ಕಾಳಜಿ ವಹಿಸಿಲ್ಲ' ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ವಿದ್ಯುತ್ ಕಂಬ ಉರುಳಿಬಿದ್ದು ಕಾಲೇಜು ವಿದ್ಯಾರ್ಥಿನಿಗೆ ಗಂಭೀರ ಗಾಯ