ಕಲಬುರಗಿ: ನಮ್ಮ ದೇಶದಲ್ಲಿ ದೇವರಿಗೆ ವಿಶೇಷ ಸ್ಥಾನಮಾನವಿದೆ. ಭಯಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ನಿತ್ಯ ದೇವರ ಮುಖಕ್ಕೆ ಪೂಜೆ ಮಾಡಿ ಭಕ್ತಿಯಿಂದ ನಮಸ್ಕರಿಸುವುದು ವಾಡಿಕೆ. ಆದರೆ ಇಲ್ಲೊಂದು ದೇವಿಗೆ ಮುಖಕ್ಕೆ ಪೂಜೆ ಮಾಡುವ ಬದಲು ಬೆನ್ನಿಗೆ ಪೂಜೆ ನಡೆಯುತ್ತದೆ. ಕೇಳಲು ಇದು ವಿಚಿತ್ರ ಅನಿಸಿದರೂ ನಿಜ.
ಇಷ್ಟೇ ಅಲ್ಲ ಭಕ್ತಿಯಿಂದ ಎಲ್ಲಾ ದೇವರಿಗೆ ಹೂವು, ಹಣ್ಣು, ಕಾಯಿ ಹಾಗು ಕರ್ಪೂರ ಸಮರ್ಪಣೆ ಮಾಡಿದರೆ, ಇಲ್ಲಿ ಇವೆಲ್ಲಾ ಕೊಡ್ತೀರೋ ಬಿಡ್ತೀರೋ ಗೊತ್ತಿಲ್ಲ. ಮೊದಲು ಚಪ್ಪಲಿ ಸಮರ್ಪಿಸಲೇಬೇಕು. ಚಪ್ಪಲಿ ಕೊಟ್ಟರೆ ಮಾತ್ರ ದೇವಿ ಸಂತೃಪ್ತಿಯಾಗುತ್ತಾಳೆ ಎನ್ನುವ ನಂಬಿಕೆ ಭಕ್ತರದ್ದು. ತೊಗರಿನಾಡು ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಗೋಳಾ (ಬಿ) ಗ್ರಾಮದಲ್ಲಿ ಇಂಥದ್ದೊಂದು ವಿಶಿಷ್ಠ ಆಚರಣೆ ನಡೆಯುತ್ತಿದೆ.
ಗೋಳಾ ಲಕ್ಕಮ್ಮ ದೇವಿ ಕಾಳಿಮಾತೆಯ ರೂಪ. ಪೂತೆ, ದುರ್ಗಮುರ್ಗೆ ಜಾನಾಂಗದವರ ಆರಾಧ್ಯ ದೈವವಾದ ಗೋಳಾ ಲಕ್ಕಮ್ಮ ದೇವಿಗೆ ಜಗತ್ತಿನ ಎಲ್ಲಿಯೂ ನಡೆಯದ ಬೆನ್ನಿಗೆ ಪೂಜೆ ನೆರವೇರುತ್ತದೆ. ಪ್ರತೀ ವರ್ಷ ದೀಪಾವಳಿಯ ಕಡೆಯ ಪಂಚಮಿಯಂದು ನಡೆಯುವ ಜಾತ್ರೆಗೆ ಬರುವ ಭಕ್ತರು ಕಾಯಿ ಕರ್ಪೂರದ ಜೊತೆಗೆ ಒಂದು ಜೊತೆ ಚಪ್ಪಲಿ ತಂದು ಸಮರ್ಪಣೆ ಮಾಡುತ್ತಾರೆ. ಹೀಗೆ ಮಾಡಿದರೆ ಇಷ್ಟಾರ್ಥ ಸಿದ್ದಿಯಾಗುತ್ತಂತೆ. ಭಕ್ತರು ಕೊಟ್ಟಿರುವ ಚಪ್ಪಲಿಯನ್ನು ದೇವಸ್ಥಾನ ಮುಂಭಾಗದಲ್ಲಿ ಕಟ್ಟಲಾಗುತ್ತದೆ. ಇದೇ ಚಪ್ಪಲಿಗೆ ಭಕ್ತಿಯಿಂದ ಭಕ್ತರು ನಮಸ್ಕರಿಸಿ ಮೈ, ಕೈಗೆ ಸವರಿಕೊಳ್ಳುತ್ತಾರೆ. ಹೀಗೆ ಮಾಡೋದರಿಂದ ದೇವಿಯ ಆಶೀರ್ವಾದ ಸಿಗುತ್ತದೆ ಎನ್ನುವುದು ದೇವಿ ಭಕ್ತರ ನಂಬಿಕೆ.
ಆಚರಣೆಯ ಹಿಂದಿನ ನಂಬಿಕೆ: ಜಗತ್ತಿನಲ್ಲೆಲ್ಲೂ ನಡೆಯದ ಬೆನ್ನಿಗೆ ಪೂಜೆ ಹಾಗೂ ದೇವಿಗೆ ಚಪ್ಪಲಿ ಹರಕೆ ಕೊಡುವ ಆಚರಣೆಗೆ ಒಂದು ಇತಿಹಾಸವಿದೆ. ಒಂದು ಬಾರಿ ಲಕ್ಕಮ್ಮ ಮಾಂಸಾಹಾರ ಸೇವಿಸಿದಳೆಂಬ ಕಾರಣಕ್ಕೆ ಪಕ್ಕದ ಧುತ್ತರಗಾಂವ ಗ್ರಾಮದ ಈರಣ್ಣ ದೇವರು ಹೊಡೆಯಲು ಲಕ್ಕಮ್ಮನ ಬೆನ್ನು ಹತ್ತಿ ಬರುತ್ತಾನೆ. ಈರಣ್ಣನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕಲ್ಲುಮುಳ್ಳೆನ್ನದೆ ಓಡುವ ಲಕ್ಕಮ್ಮ, ಗೋಳಾ ಗ್ರಾಮದ ಹೊರವಲಯದ ಗುಡ್ಡದಲ್ಲಿ ಕಾಲು ಜಾರಿ ಬೀಳುತ್ತಾಳೆ.
ಹೀಗೆ ಬಿದ್ದವಳು ಇಲ್ಲಿಯೇ ನೆಲೆಸಿದ್ದಾಳೆ. ಓಡುವಾಗ ಬೋರಲಾಗಿ ಬಿದ್ದಿದ್ದರಿಂದ ಇಂದಿಗೂ ಬೋರಲು ಸ್ಥಿತಿಯಲ್ಲಿಯೇ ಭಕ್ತರು ಪೂಜೆ ಸಲ್ಲಿಸುವ ಸಂಪ್ರದಾಯ ಮುಂದುವರೆಸಿದ್ದಾರೆ. ಕಲ್ಲುಮುಳ್ಳಿನಲ್ಲಿ ಓಡೋಡಿ ಬರುವ ದೇವಿಗೆ ಚಪ್ಪಲಿ ನೀಡಿದರೆ ಖುಷಿಯಾಗುತ್ತಾಳೆ. ರಾತ್ರಿ ಪ್ರತ್ಯಕ್ಷವಾಗುವ ದೇವಿ ಚಪ್ಪಲಿ ತೊಟ್ಟು ಓಡಾಡುತ್ತಾಳೆ. ಇದರಿಂದ ಚಪ್ಪಲಿ ನೀಡಿದ ಭಕ್ತರಿಗೆ ಒಳಿತಾಗುತ್ತದೆ ಎನ್ನುವುದು ಭಕ್ತರ ಬಲವಾದ ನಂಬಿಕೆ.
ಗೋಳಾ ಲಕ್ಕಮ್ಮ ದೇವಿಗೆ ಕಲಬುರಗಿ ಮಾತ್ರವಲ್ಲ, ಪಕ್ಕದ ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯದಲ್ಲಿಯೂ ಭಕ್ತರಿದ್ಧಾರೆ. ಜಾತ್ರೆಗೆ ತಪ್ಪದೆ ಬಂದು ದರ್ಶನ ಪಡೆಯುತ್ತಾರೆ. ಸಸ್ಯಾಹಾರಿ ಭಕ್ತರು ಹೋಳಿಗೆ ಸಮರ್ಪಿಸಿದರೆ, ಮಾಂಸಾಹಾರಿ ಭಕ್ತರು ಕುರಿ ಕೋಳಿ ಬಲಿಕೊಟ್ಟು ಲಕ್ಕಮ್ಮನಿಗೆ ರಕ್ತತರ್ಪಣ ಮಾಡುವರು. ಊರಿನಿಂದ ಕಟ್ಟಿಗೆಯ ಕಳಶ ಹಾಗೂ ಕಂಚಿನ ಕಳಶ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಬಂದು ತಲುಪಿದರೆ ಜಾತ್ರೆ ಸಮಾಪ್ತಿಯಾಗುತ್ತದೆ. ಕಳಶಗಳನ್ನು ದೇವಸ್ಥಾನಕ್ಕೆ ತಲುಪಿಸಿದ ನಂತರ ದೇವಸ್ಥಾನದಲ್ಲಿ ಯಾರೂ ಉಳಿದುಕೊಳ್ಳುವುದಿಲ್ಲ. ಜನಸಾಮಾನ್ಯರ ಜಾತ್ರೆಯ ನಂತರ ರಾತ್ರಿ ದೆವ್ವಗಳು ಲಕ್ಕಮ್ಮನ ಜಾತ್ರೆ ನಡೆಸುತ್ತವೆ ಎಂಬ ನಂಬಿಕೆಯಿದೆ. ಹೀಗಾಗಿ ಜಾತ್ರೆಯ ದಿನ ರಾತ್ರಿ ಯಾವ ಭಕ್ತರೂ ದೇವಸ್ಥಾನ ಬಳಿ ಸುಳಿಯುವುದಿಲ್ಲ!.
ಇದನ್ನೂ ಓದಿ: ಈ ದೇವರಿಗೆ ಮದ್ಯದ ಜತೆ ಸ್ನ್ಯಾಕ್ಸ್ ನೈವೇದ್ಯ ಮಾಡಿದವರು ಕುಡಿತ ಬಿಡ್ತಾರಂತೆ!