ಕಲಬುರಗಿ: ಭೀಮಾ ನದಿ ಪ್ರವಾಹದಿಂದ ಜಿಲ್ಲೆಯ ಅಫಜಲಪುರ ತಾಲೂಕಿನ ಶಿರವಾಳ ಗ್ರಾಮ ಜಲಾವೃತವಾಗಿದ್ದು, ಪ್ರವಾಹ ಸಂತ್ರಸ್ತರ ಗೋಳು ಕೇಳಲು ಯಾವೊಬ್ಬ ಅಧಿಕಾರಿಗಳು ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಭೀಮಾ ನದಿಗೆ 8.50 ಲಕ್ಷ ಕ್ಯೂಸೆಕ್ಗೂ ಅಧಿಕ ನೀರು ಹರಿಬಿಡಲಾಗಿದೆ. ಇದರಿಂದಾಗಿ ನದಿಪಾತ್ರದ 154ಕ್ಕೂ ಅಧಿಕ ಗ್ರಾಮಗಳಿಗೆ ಜಲ ಕಂಟಕ ಎದುರಾಗಿದೆ. ಜಿಲ್ಲೆಯ ಅಫಜಲಪುರ ತಾಲೂಕಿನ ಶಿರವಾಳ ಗ್ರಾಮಕ್ಕೂ ನೀರು ನುಗ್ಗಿ 20ಕ್ಕೂ ಅಧಿಕ ಮನೆಗಳು ನೀರಿನಲ್ಲಿ ಮುಳುಗಿದ್ದು, ಬಡ ಕುಟುಂಬಗಳು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಇಷ್ಟಾದರೂ ಸಹ ಯಾವುದೇ ಜನ ಪ್ರತಿನಿಧಿಯಾಗಲಿ, ಸಂಬಂಧಿಸಿದ ಅಧಿಕಾರಿಗಳಾಗಲಿ ಸಂತ್ರಸ್ತರ ಗೋಳು ಕೇಳಲು ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಾಳಜಿ ಕೇಂದ್ರ ಸ್ಥಾಪಿಸಲು ವಿಳಂಬ
ಊರೊಳಗೆ ನೀರು ನುಗ್ಗಿ ನಾಲ್ಕು ದಿನಗಳು ಕಳೆದರೂ, ಗಂಜಿ ಕೇಂದ್ರ ಸ್ಥಾಪಿಸದ ಕಾರಣ ಸ್ವತಃ ಗ್ರಾಮಸ್ಥರೆ ಗಂಜಿ ಕೇಂದ್ರವನ್ನು ಸ್ಥಾಪಿಸಿ ಸಂತ್ರಸ್ತರಿಗೆ ಆಸರೆಯಾಗಿದ್ದಾರೆ ಎನ್ನಲಾಗಿದೆ. ಆದ್ರೆ, ಸಂಕಷ್ಟದಲ್ಲಿರುವ ಗ್ರಾಮಸ್ಥರ ನೆರವಿಗೆ ಬರಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಬಾರದೆ ಪಿಡಿಓ ಒಬ್ಬರು ಇಲ್ಲಿಗೆ ಧಾವಿಸಿ ಕಾಳಜಿ ಕೇಂದ್ರದಲ್ಲಿರುವ ಸಂತ್ರಸ್ತರಿಗೆ ಕೇವಲ ಬ್ರೆಡ್ ಹಾಗೂ ಬಾಳೆ ಹಣ್ಣು ನೀಡಿ ಹೋಗಿದ್ದಾರೆ. ಇದರಿಂದ ಹಸಿವು ನೀಗಲು ಸಾಧ್ಯವೇ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.